Tuesday 3 November 2020

ಪೂಜನೀಯ ಮಾತೆಯ ಪರಿಸ್ಥಿತಿ 😰

ದೆಷ್ಟು ಸುಂದರ... ಯಾರ ಭಯವಿಲ್ಲದೇ ಸ್ವಚ್ಛಂದವಾಗಿ ಬೆಳೆದಿರುವ ಹಸಿರು ಹುಲ್ಲನ್ನು ಮೇಯುತ್ತಾ ಸಾಗುವ ಗೋವುಗಳ ಗುಂಪನ್ನು ನೋಡುವುದೇ ಆನಂದ. 

ಆದರೆ ಅದೇಕೋ ಅವೆಲ್ಲ ದೃಶ್ಯಗಳು ಅತಿ ಅಪರೂಪವೆನಿಸಿ ಬಿಟ್ಟಿವೆ.

ಸ್ವತಂತ್ರವಾಗಿ ವಿಹರಿಸಿ ಹಾದಿ-ಬೀದಿಯಲಿರುವ ಹುಲ್ಲನ್ನು ಮೇದು ಮನೆಗೆ ಬಂದು ಅಮೃತವನ್ನೀವೆ ಎಂಬ ವಾಕ್ಯವೂ ಹಾಡಿನಲ್ಲಷ್ಟೇ ಸೀಮಿತವಾಗಿ ಉಳಿದ್ಹೋಗಿದೆ. ಗೋಮಾಳಗಳಂತೂ ಸ್ವಾರ್ಥ ಬುದ್ಧಿಯ ಮನುಜನ ಆಪೋಶನಕ್ಕೊಳಪಟ್ಟು ವಿರಳಾತಿ ವಿರಳವಾಗಿದೆ. 

ಈ ಎಲ್ಲಾ ವಿಚಾರಗಳು ಮನದೊಳಗೆ ಹರಿದಾಡಲು ಆರಂಭಿಸಿದ್ದು... ಕಳೆದೆರಡು ದಿನದ ಹಿಂದೆ ನಾನು ಸಂಜೆ ಮನೆಯ ಕಡೆಗೆ ತೆರಳುತ್ತಿದ್ದ ಸಮಯವದು ; ಮಾರ್ಗ ಮಧ್ಯದಲ್ಲಿ ಕಂಡ ಗೋವುಗಳ ಸಣ್ಣ ಹಿಂಡೊಂದು ಮನಸಿಗೆ ಮುದವನ್ನೂ ನೀಡಿತ್ತು ಮತ್ತು ಅವುಗಳು ಜೊತೆಗೆ ಸಾಗುವುದನ್ನು ನೋಡಿ ಖುಷಿಯೂ ಆಗಿತ್ತು ಹಾಗು ಆ ಖುಷಿಯು ಮನಸಿಂದ ಮಾಸುವ ಮೊದಲೇ ಮನೆಯನ್ನೇನೋ ತಲುಪಿದೆ ಆದರೆ ಕಾಣದೇ ಮನವನು ಕೆಣಕಿದ ಕೆಲವು ವಿಚಾರಗಳಿನ್ನೂ ನನ್ನೊಳು ಹಾಗೇ ಉಳಿದಿತ್ತು.

ಈ ಕಾಣದೇ ಕಾಡಿರುವ ವಿಷಯಗಳ ಬಗ್ಗೆ ಕೆದಕುತ್ತಾ ಕುಳಿತಾಗ ಯೋಚನೆಗೆ ಬಂದದ್ದು.... "ಬದಲಾವಣೆ".

ನಾವೆಲ್ಲರೂ ಬದುಕಿನಲ್ಲಿ ಬದಲಾವಣೆಯನ್ನು ಬಯಸುತ್ತೇವೆ ಹಾಗೂ ನಮ್ಮ ಆಶೋತ್ತರಗಳಿಗೆ ಬೇಕಾದಂತೆ ಬದಲಾಗುತ್ತಿದ್ದೇವೆಯೂ ಕೂಡ.

ಹೌದು...ಕಾಲ ಬದಲಾಗಿದೆ ಅಲ್ವಾ?!.. ಆದರೆ ಅರೆಕ್ಷಣ ಯೋಚಿಸಿದಾಗ ಒಂದೊಮ್ಮೆ ಅನಿಸುತ್ತದೆ ಕಾಲವೇನು ಬದಲಾಗಿಲ್ಲ ಆದರೆ ನಾವಂತೂ ಖಂಡಿತ ಬದಲಾಗಿದ್ದೇವೆ ಹಾಗಾಗಿ ಎಲ್ಲವೂ ಬದಲಾಗಿದೆಯಷ್ಟೆ 🤷 

ಅದೇನೇ ಇರಲಿ ಸ್ವಾತಂತ್ರ್ಯ ಕಳೆದು ಸುಮಾರು 75 ವರ್ಷಗಳು ಸರಿದರೂ ಸಹ ಗೋವಿನ ಸ್ಥಿತಿ ಮಾತ್ರ ಇನ್ನು ಬದಲಾಗದೆ ಹಾಗೇ ಇದೆ. ಬ್ರಿಟಿಷರ ದಾಸ್ಯದ ಬದುಕಿನಿಂದ ನಾವೇನೋ ಹೊರಬಂದೆವು ಆದರೆ ಗೋವುಗಳು ಮಾತ್ರ ಇನ್ನೂ ಅದೇ ದುಸ್ಥಿತಿಯ ಪರಿಸ್ಥಿತಿಗಳನ್ನು ಎದುರಿಸುತ್ತಿದೆ. 

ರಾಷ್ಟ್ರವು ಪ್ರತಿಯೊಂದು ಕ್ಷೇತ್ರದಲ್ಲೂ ಸಾಕಷ್ಟು ಏಳು - ಬೀಳುಗಳನ್ನು ದಾಟುತ್ತಾ ಪ್ರಗತಿಯನ್ನು ಕಂಡಿದೆ ಮತ್ತು ಕಾಣುತ್ತಲಿದೆ ಆದರೂ ಕೋಟಿ ಪಾಪಗಳ ಕಳೆವ ಪುಣ್ಯಕೋಟಿಯ ಕಷ್ಟ ಮಾತ್ರ ಕಳೆಯುತ್ತಿಲ್ಲ. 

ಅಭಿವೃದ್ಧಿಯ ಸೋಗಿನಲ್ಲಿ ಮೈಮರೆತಿರುವ ಮನುಜ ಕುಲವಿಂದು ತನ್ನೊಂದಿಗೆ ಇರುವ ಪ್ರಕೃತಿ ಹಾಗೂ ಗೋವಿನ ಕೂಗನ್ನು ಕೇಳಿಯೂ ಕೇಳದಾಗಿಹ ಕಿವುಡನಾಗಿ ಬಿಟ್ಟನು ಎಂದರೆ ತಪ್ಪಾಗಲಾರದು.


ಭಾರತದ ಇತಿಹಾಸದ ಪುಟಗಳನೊಮ್ಮೆ ತಿರುವಿ ಹಾಕಿದಾಗ ದೇಶದಲ್ಲಾದ ಬದಲಾವಣೆಗಳ ಮೈಲುಗಲ್ಲುಗಳನ್ನು ನೋಡುತ್ತಾ ಹೋದರೆ ನಿಜವಾಗಿಯೂ ಬದುಕು ಬರಡಾಗಿರುವುದು ಗೋವಿನದ್ದೇ.  

ವರುಷಗಳು ಉರುಳಿದಂತೆ... ಯಾರ ಭಯವಿಲ್ಲದೇ ಸ್ವಚ್ಛಂದವಾಗಿ ತಿರುಗಾಡುತ್ತಿದ್ದ ಸಾವಿರಾರು ಗೋವುಗಳು ನಿರ್ದಯವಾಗಿ ಸಾವಿನ ಮನೆಗೆ ಸಾಗಿಸಲ್ಪಡುವುದಲ್ಲದೇ ಅಲ್ಲಿಯೂ ಸಹ ವಿಕೃತ ರೀತಿಯಲ್ಲಿ ಜೀವ ಸಹಿತ ಹಸುಗಳ ಚರ್ಮ ಸುಲಿಯುವ ಮುಖಾಂತರ ಚರ್ಮ,ಮಾಂಸ, ದನದ ಕೊಬ್ಬು ಇತ್ಯಾದಿ ವಿಷಯಗಳಿಗಾಗಿ ಅವ್ಯಾಹತವಾಗಿ ಲಕ್ಷಕ್ಕೂ ಮಿಕ್ಕಿ ಗೋವುಗಳ ವಧೆ ನಡೆಯಿತು ಹಾಗೂ ಇಂದಿಗೂ ಸಹ ತಮ್ಮ ಸ್ವಾರ್ಥ ಲಾಭಕ್ಕಾಗಿ ಗೋವುಗಳನ್ನು ಕದಿಯುವುದು ಮತ್ತು ಮಾಂಸಕ್ಕಾಗಿ ಅಕ್ರಮವಾಗಿ ಸಾಗಿಸುವುದು ಮುಂದುವರೆಯುತ್ತಲೇ ಬಂದಿದೆ.

ಹಾಗಾದರೆ ಇಷ್ಟು ವರುಷಗಳು ಕಳೆದರೂ ಕೂಡ ಗೋವಿನ ಈ ಪರಿಸ್ಥಿತಿಯನ್ನು ಕೊನೆಗಾಣಿಸಲು ಬದಲಾವಣೆಗಳೇನು ನಡೆದಿಲ್ಲವೇ ಎಂದು ಯೋಚಿಸುತ್ತಿರಬಹುದು ಅಲ್ವೇ?!!...

ನಿಜ ...ಬದಲಾವಣೆಗಳೇನೋ ಬೇಕಾದಷ್ಟು ನಡೆದಿವೆ ಆದರೆ ಸ್ವಾತಂತ್ರ್ಯ ನಂತರ ಭಾರತದಲ್ಲಿರುವ ಜನಸಂಖ್ಯೆಯಲ್ಲಿ ಏರಿಕೆಯಾಯಿತೇ ವಿನಃ ಜೀವಮಾನವಿಡೀ ಹಾಲನ್ನೀಯುವ ಗೋವುಗಳ ಸಂಖ್ಯೆಯು ಏರಿಕೆಯಾಗಲೇ ಇಲ್ಲ. ಅದರ ನಂತರದ ದಿನಗಳಲ್ಲಿ ಬಂದ "ಶ್ವೇತ ಕ್ರಾಂತಿ"ಯಂತಹ ವಿಚಾರಗಳಿಂದ ಭಾರತದಿ ಪುನಃ ವಿದೇಶಿ ತಳಿಗಳೇ ಬಂದು ವ್ಯಾಪಿಸಿದವು ಬಿಟ್ಟರೆ... ಭಾರತೀಯ ತಳಿಗಳ ಸಂಖ್ಯೆ ಕ್ಷೀಣಿಸುತ್ತಲೇ ಬಂದವು. 

ಆದರೂ ದೇವರ ದಯೆ ಎಂಬಂತೆ... ಇನ್ನೂ ನಮ್ಮ ದೇಶದಲ್ಲಿರುವ ಗೋ ಪ್ರೇಮಿಗಳಿಂದ ಅಥವಾ ರೈತರಿಂದಾಗಿಯೋ... ಏನೋ ...ಸುಮಾರು 40 ರಿಂದ 43 ಭಾರತೀಯ ತಳಿಗಳು ಉಳಿದುಕೊಂಡವು.

1760 ರಿಂದ ಆರಂಭಿಸಿ ಇಂದಿನವರೆಗೂ ನಿರಂತಂರವಾಗಿ ಕಟುಕರ ಕೈ ಸೇರಿ ಹಿಂಸಾತ್ಮಕ ವೇದನೆಯನ್ನು ಅನುಭವಿಸಿ ಹತ್ಯೆಗೊಳಗಾಗುವ ಗೋವಿನ ಪರಿಸ್ಥಿತಿಯನ್ನು ಸುಧಾರಿಸುವ ಪ್ರಯತ್ನಗಳೂ ಅನೇಕ ನಡೆದರೂ ಕೆಲವು ಕಾರಣಗಳಿಂದ ಸಮರ್ಪಕವಾಗಿ ಗೋವಿನ ರಕ್ಷಣಾ ಕಾರ್ಯ ನಡೆಯುತ್ತಿಲ್ಲ ಹಾಗೂ ನಡೆಸಲು ಸಾಧ್ಯವಾಗುತ್ತಿಲ್ಲ.

ಆ ಕೆಲವು ಕಾರಣಗಳಲ್ಲಿ ಕಾನೂನು ಕೂಡ ಒಂದು. ಕೆಲವೊಂದು ಬಾರಿ ಕಾನೂನುಗಳು ಇದ್ದರೂ ಶಿಕ್ಷೆ ನೀಡುವ ಕಾರ್ಯ ನಡೆಯುತ್ತಿಲ್ಲ ಹಾಗೂ ಕೆಲವು ಸಲ ಶಿಕ್ಷೆ ನೀಡಲು ಬೇಕಾದ ಕಾನೂನೇ ಸರಿಯಾಗಿರುವುದಿಲ್ಲ. ಇವೆಲ್ಲವೂ ಸರಿಯಿದ್ದಾಗ ರಾಜತಾಂತ್ರಿಕತೆಯೇ ಸಹಕಾರಿಯಾಗಿರುವುದಿಲ್ಲ ಹಾಗೂ ಭಾರತೀಯ ಗೋತಳಿಗಳ ಸಂಪೂರ್ಣ ಸಂರಕ್ಷಣೆ, ಸಂಶೋಧನೆಗೆ ಅಷ್ಟಾಗಿ ಪ್ರೋತ್ಸಾಹವನ್ನೂ ನೀಡುತ್ತಿಲ್ಲ. ಅದುವೇ ನಮ್ಮ ದೇಶದ ವಾಸ್ತವ ಮತ್ತು ವಿಷಾದದ ಸಂಗತಿ. 

ಇದಕ್ಕೆ ತಾಜಾ ಉದಾಹರಣೆ ಎಂದರೆ ಪ್ರಸ್ತುತ ನಾವೀಗ ಏನು ಲೀಟರ್ ಗಟ್ಟಲೆ ಹಾಲನ್ನು ಹಾಲಿನ ಕೇಂದ್ರದಿಂದ ತಂದು ಬಳಸುತ್ತಿದ್ದೇವೆ ಅದು ಭಾರತೀಯ ಗೋ ತಳಿಗಳ ಹಾಲಲ್ಲ. ಅದು ವಿದೇಶಿ ತಳಿಗಳ ಹಾಲು. ಇದು ಒಂದು ಸಣ್ಣ ವಿಚಾರವಾದರೂ ಪೂರ್ತಿ ವಿಷಯದ ಕುರಿತು ನಾವು ಅರಿಯುವುದು ಅವಶ್ಯವೇ ಆಗಿದೆ. 

ಏಕೆಂದರೆ ಪ್ರಕೃತಿ ಮತ್ತು ಗೋವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ ಹಾಗೂ ಅವುಗಳ ರಕ್ಷಣೆಯು ಮುಂದಿನ ಸ್ವಸ್ಥ ಮತ್ತು ಸ್ವಚ್ಛ ಭವಿಷ್ಯ ಗಳಿಗಾಗಿ ಕಾಪಾಡುವುದು ಕರ್ತವ್ಯವೇ ಆಗಿದೆ. 

ಹಾಗಾಗಿ ಕಾಲ ಕೆಟ್ಟ ಮೇಲೆ ಬುದ್ಧಿ ಬಂತು ಎಂಬ ಮಾತಿನಂತಾಗುವ ಮೊದಲೇ ನಾವು ಮಾಡುವ ಕೆಟ್ಟ ಕಾರ್ಯಗಳಿಂದ  ಕಾಲವೇ ಕಡಿವಾಣ ಹಾಕುವ ಮೊದಲು ಅರಿತು ಬಾಳುವುದು ಅನಿವಾರ್ಯವಾಗಿದೆ. 

ಬಂಗಾರದ ಗಣಿಯಾಗಿದ್ದ ಭಾರತವನ್ನು ಮತ್ತದೇ ಸ್ಥಿತಿಗೆ ಮರಳಿಸಲು ನಾವು ಅಣಿಯಾಗಿಬೇಕಿದೆ.

ಹಾಗಾಗಿ ದೇಶದ ಕೃಷಿಯ ಆಧಾರಸ್ತಂಭವಾದ ಗೋವುಗಳ ಹತ್ಯೆಯು  ರಾಷ್ಟ್ರದಲ್ಲಿ ಸಂಪೂರ್ಣ ನಿಷೇಧವಾಗಿ, ಯಾವ ಕಟುಕರ ಭಯವಿಲ್ಲದೇ ಸ್ವತಂತ್ರವಾಗಿ ಸುತ್ತಾಡಿ ಹುಲ್ಲನ್ನು ಮೇಯುವ ಭಾಗ್ಯದ ಬೆಳಕು ಗೋವುಗಳ ಬದುಕಿನಲ್ಲಿ ಉದಯಿಸುವುದೋ ಆಗ ಮಾತ್ರ ಭಾರತದ ಭಾಗ್ಯೋದಯವು ಸಾಧ್ಯ .

ಅವಕಾಶ ಸಿಕ್ಕಾಗ ಪ್ರತಿಯೊಂದರಲ್ಲೂ ಸ್ವಾರ್ಥವನ್ನೇ ಹುಡುಕುವ ಈ ಮನುಷ್ಯ .....ಜೀವನದಲ್ಲಿ ಸಾರ್ಥಕ್ಯವ ಪಡೆಯಲು ಇನ್ನಾದರೂ ನಿಸ್ವಾರ್ಥಿಯಾಗಿ ಜೀವನ ಸವೆಸುವ ಗೋಮಾತೆಗೆ ಕಷ್ಟವ ಕಳೆಯುವ ಸಾರಥಿಗಳಾಗೋಣ. 



✍️ ನೇತ್ರಾವತಿ ತೀರದಿಂದ.


ತೋಚಿದ್ದನ್ನು ಗೀಚಿದ್ದೇನೆ ಅಷ್ಟೇ. ಬರೆದಿರುವ ಅಕ್ಷರಗಳೆಲ್ಲವೂ ಗೋ ಮಾತೆಯ ಚರಣಗಳಿಗೆ ಅರ್ಪಿತ🙏😊.




#ವಂದೇ ಗೋಮಾತರಂ


#ಗಾವೋ ವಿಶ್ವಸ್ಯ ಮಾತರಃ


#ಜೈ ಗೋಮಾತ


#ಗೋವು ಉಳಿಯಲಿ - ಭಾರತ ಬೆಳಗಲಿ