Saturday 4 March 2017

ನುಗ್ಗೆ -ಬದನೆ ಸಾಂಬಾರ್ ರಹಸ್ಯ

               
          ನುಗ್ಗೆ  ಮತ್ತು ಬದನೆ ಸಾಂಬಾರ್ ಎಂದರೆ ಸಾಕು; ನನಗಂತೂ ನೆನಪಾಗೋದು 'ಕೆಡ್ಡಾಸ'. ಕೆಡ್ಡಾಸದಂದು ಮಾಡುವ ನುಗ್ಗೆ ಬದನೆ ಸಾಂಬಾರ್. ಬೇರೆ ದಿನಗಳಲ್ಲೂ ಮಾಡಬಹುದು;ಆದರೂ ಕೆಡ್ಡಾಸ ಸಮಯದಲ್ಲಿ ವಿಶೇಷವಾಗಿ ಮಾಡುವರು. ನನಗಂತೂ  ಬಹಳ ಪ್ರಿಯ. ಕೆಡ್ದಾಸವು ತುಳುನಾಡ ವಿಶಿಷ್ಟ ಹಬ್ಬವಾಗಿದ್ದು, ಭೂಮಿ ತಾಯಿಯನ್ನು ಜನರು ಪೂಜಿಸುವ ದಿನ. ಭಾರತೀಯ ಪದ್ಧತಿ ಪ್ರಕಾರ ಇದು ಮಕರ ತಿಂಗಳಿನ ಇಪ್ಪತ್ತೇಳನೇ ದಿನದಂದು ಆರಂಭವಾಗಿ ಕುಂಭ ಸಂಕ್ರಮಣದಂದು ಕೊನೆಗೊಳ್ಳುವುದು. ಈ    ಮೂರು -ನಾಲ್ಕು ದಿನಗಳನ್ನು ತುಳುನಾಡ ಜನರು "ಕೆಡ್ದಾಸ" ಎನ್ನುವರು.

ಕೆಡ್ದಾಸ ಎಂದರೆ ಭೂಮಿ ತಾಯಿ ಮುಟ್ಟು ಆಗಿ ಸ್ನಾನ ಮಾಡುವವರೆಗಿನ ದಿನಗಳು.  ತುಳುನಾಡ ಜನರ ನಂಬಿಕೆಯಂತೆ ಈ ದಿವಸಗಳಲ್ಲಿ ಭೂಮಿಯನ್ನು ಅಗೆಯಬಾರದು. ಕೆಡ್ಡಾಸದ ಕೊನೆಯ ದಿನವಾದ ಕುಂಭ ಸಂಕ್ರಮಣದಂದು ಭೂಮಿ ತಾಯಿ ಮುಟ್ಟು ಕಳೆದು ಸ್ನಾನ ಮಾಡಲೆಂದು ತೆರಳುವ ದಿನ. ಆ ದಿನ ಮನೆಯ ಮುತ್ತೈದೆಯರು ಮುಂಜಾನೆ ಎದ್ದು  ತುಳಸಿ ಕಟ್ಟೆಯ ಮುಂದೆ ಗೊಂಪಿನ ಎಲೆಯಲ್ಲಿ ಭೂಮಿಗೆ ಸೀಗೆ ಪುಡಿ, ಬಾಗೇಪುಡಿ , ಅರಶಿನ ಮತ್ತು ಕುಂಕುಮ ಇಟ್ಟು ಭೂಮಿಗೆ ತೆಂಗಿನ ಎಣ್ಣೆಯನ್ನು ಬಿಟ್ಟು ನಮಸ್ಕರಿಸುವರು.







ಕೆಡ್ದಾಸದ ದಿನಗಳಲ್ಲಿ ವಿಶೇಷವಾಗಿ ಮಾಡಲಾಗುವ ನುಗ್ಗೆ ಬದನೆಕಾಯಿ ಸಾಂಬಾರ್ ನನಗೆ ಬಾಲ್ಯದಿಂದಲೇ ಇಷ್ಟ. ಮನೆಯಲ್ಲಿ ಏನೇ ವಿಶೇಷತೆ ಅಥವಾ ಯಾವುದೇ ಹೊಸ ವಿಷಯವಿರಲಿ ಅದನ್ನು ಕುತೂಹಲದಿಂದ ನೋಡಿ ; ಅದೇನು-ಇದೇನು , ಅದ್ಯಾಕೆ ಹಾಗೆ ? ಎಂದು ಹೆಚ್ಚಾಗಿ ಅಜ್ಜಿಯ ಬಳಿ  ಪ್ರಶ್ನಿಸುತ್ತಿದ್ದೆ. ಒಂದು ಸಲ ನನಗೆ ಪ್ರಶ್ನೆಯೊಂದು ಮನದಲ್ಲಿ ಸುಳಿದಾಡಲು ಶುರುವಾಯಿತು. ಅದು ಕೆಡ್ದಾಸದ ಸಮಯ.ನಾನಾಗ ಮೂರನೇ  ತರಗತಿಯಲ್ಲಿ ಓದುತ್ತಿದ್ದೆ . ಕೆಡ್ದಾಸದಂದು ನುಗ್ಗೆ ಬದನೆ ಸಾಂಬಾರ್ ನ್ನೇ ಯಾಕೆ ಮಾಡಿ ಉಣ್ಣಬೇಕು???.... ಎಂದು ನನ್ನಜ್ಜಿಯ ಬಳಿ ಕೇಳಿದೆ.


ನನ್ನ ಪುಟ್ಟ ಮನದೊಳಗೆ ಈ ಪ್ರಶ್ನೆ ಮೂಡಲು ಕಾರಣವಾದ ಅಂಶವೇನೆಂದರೆ - ನಾನು ವಿದ್ಯಾಭ್ಯಾಸ ಮಾಡಿದ್ದು ಸರ್ಕಾರಿ ಶಾಲೆಯಲ್ಲಿಯಾದ್ದರಿಂದ ,ಶಾಲೆ ಮಕ್ಕಳಿಗೆ ಸರಕಾರವು  ಉಚಿತ ಮಧ್ಯಾಹ್ನ ಬಿಸಿಯೂಟವನ್ನು ನೀಡುತ್ತಿತ್ತು . ಊಟ ಅಂದ್ಮೇಲೆ ಸಾಂಬಾರ್ ಬೇಕೇ ಬೇಕು ನೋಡಿ. ಶಾಲೆಯಲ್ಲಿ ಬದನೆಯನ್ನು ಸಾಂಬಾರ್ ಗೆ ಹಾಕಿದಂದು ಹೆಚ್ಚಿನ ನನ್ನೆಲ್ಲಾ ಸ್ನೇಹಿತರು ಬೇಡವೆಂದು ಚೆಲ್ಲುತ್ತಿದ್ದರು. ನಾನು ಒಂದು ದಿನ ನೀವ್ಯಾಕೆ ಬದನೆ ಹೋಳನ್ನು ಸಾಂಬಾರ್ ನಿಂದ ಹೆಕ್ಕಿ ಚೆಲ್ಲೋದು?... ಅಂತ ಕೇಳ್ದೆ. 
ಸಾಮಾನ್ಯವಾಗಿ ಬದನೆಕಾಯಿಯನ್ನು ಚರ್ಮವ್ಯಾಧಿ  ಇರುವವರು ನಂಜಾಗುತ್ತದೆ ಅನ್ನೋ ಕಾರಣಕ್ಕೆ ಸೇವಿಸುವುದಿಲ್ಲ.ಆದರೆ  ಶಾಲೆಯಲ್ಲಿ ವಿದ್ಯಾರ್ಥಿಗಳು 'ನಂಜು ಬದನೆ' ಎಂದೇ ಕರೆಯುತ್ತಿದ್ದರು ಮತ್ತು ತಿನ್ನದೇ ಚೆಲ್ಲುತ್ತಿದ್ದರು. ನಂಜು ಅಂದ್ರೆ ಒಂದರ್ಥದಲ್ಲಿ ಅಸೂಯೆ. ಬದನೆ ಜಾಸ್ತಿ ತಿಂದರೆ ನಂಜು ಭಾವನೆ ಹೆಚ್ಚಾಗುತ್ತೆ ಅಂತ ಸ್ನೇಹಿತರು ನನ್ನಲ್ಲಿ ಹೇಳಿದರು. ಹಾಗೆ ನಾನು ಕೂಡ ಬದನೆ ನಂಜು ಅಂತ ಅಂದುಕೊಂಡು ಬಿಟ್ಟೆ.

ಅದು ಕೆಡ್ದಾಸದ ಸಮಯವಾದ ಕಾರಣ ಮನೆಯಲ್ಲಿ ಪ್ರತಿವರ್ಷದಂತೆ ನುಗ್ಗೆ ಬದನೆ ಸಾಂಬಾರ್ ನ್ನು ಮಾಡಿದ್ದರು. ಪ್ರತಿ ನಿತ್ಯ ಮನೆಯಲ್ಲಿ ಅಜ್ಜ- ಅಜ್ಜಿ ಜೊತೆ ಕುಳಿತು ಊಟ ಮಾಡುತ್ತಿದ್ದ ನಾನು ಎಂದಿನಂತೆ ಊಟಕ್ಕೆ ಕುಳಿತು ನುಗ್ಗೆ ಬದನೆ ಸಾಂಬಾರ್ ಹಾಕಿ ಊಟ ಮಾಡ್ತಾ ಅಜ್ಜಿ ಬಳಿ ಯಾಕೆ ಕೆಡ್ಡಾಸದಂದು ನುಗ್ಗಿ ಬದನೆ ಸಾಂಬಾರ್ ಊಟ ಮಾಡಬೇಕು; ಬದನೆ ನಂಜಲ್ವಾ; ತಿಂದರೆ ನಂಜು ಹೆಚ್ಚಾಗುತ್ತಲ್ಲ ಯಾಕೆ ತಿನ್ನೋದು ಅಂತ ಕೇಳಿದೆ ? ಆಗ ಅಜ್ಜಿ ಅಂದ್ರು ಕೆಡ್ಡಾಸದಂದು ನುಗ್ಗೆ ಬದನೆ ಸಾಂಬಾರ್ ಮಾಡಿ ತಿನ್ನದಿದ್ದರೆ ನಮ್ಮ ಎಲುಬುಗಳೆಲ್ಲ ದುರ್ಬಲವಾಗುತ್ತವೆ (ಕುಂಬಾಗುತ್ತವೆ). ಹಾಗಾಗಿ ಎಲುಬುಗಳು ಗಟ್ಟಿಯಾಗಲಿ ಅಂತ ನುಗ್ಗೆ -ಬದನೆ ಸಾಂಬಾರ್ ಮಾಡಿ ತಿನ್ನೋದು ಅಂತ ಹೇಳಿದರು. ಕೂಡಲೇ ನಾನು ತಟ್ಟೆಬದಿಯಲ್ಲಿ ಹೆಕ್ಕಿಟ್ಟಿದ್ದ ಬದನೆ ಹೋಳನ್ನೆಲ್ಲ  ತಿಂದ್ಬಿಟ್ಟೆ. ಆವತ್ತಿನಿಂದ ನಂತ್ರ ನಾನಂತೂ ನುಗ್ಗೆ- ಬದನೆ ಸಾಂಬಾರನ್ನು ಊಟಮಾಡದೆ ಬಿಟ್ಟಿಲ್ಲಪ್ಪ.....                                 

ಇದು ನನ್ನ ಬಾಲ್ಯದ ಒಂದು ಸಣ್ಣ ನೆನಪು. ಈಗಂತೂ ಅದನ್ನು ನೆನೆದಾಗ ನಗು ಬರುವುದು. ಅದೆಲ್ಲ ಇರಲಿ ... ನೀವು ಸಹ ಇನ್ನು ಕೆಡ್ಡಾಸದಂದು ನುಗ್ಗೆ ಬದನೆ ಸಾಂಬಾರ್ ಊಟ ಮಾಡ್ತೀರಲ್ಲ.... ಇಲ್ಲದಿದ್ದರೆ ನಿಮ್ಮ ಎಲುಬುಗಳು ದುರ್ಬಲವಾಗುವವು . ತಿಳಿಯಿತಲ್ಲಾ.... ಈ ನುಗ್ಗೆ  ಬದನೆ  ಸಾಂಬಾರ್ ಯಾಕೆ ಕೆಡ್ದಾಸ ದಂದು  ಮಾಡಿ ಊಟ ಮಾಡಬೇಕು ಎಂಬುದರ ಬಗ್ಗೆ   ವೈಜ್ಞಾನಿಕ  ಕಾರಣ  ತಿಳಿಯದು ಮತ್ತು ಅದರ ವಿಚಾರವಾಗಿ ತಲೆಕೆಡಿಸಿಕೊಳ್ಳಲಿಲ್ಲ ಯಾಕಂದ್ರೆ ನಾನು ಕಲಾ ವಿಭಾಗದ ವಿದ್ಯಾರ್ಥಿ ;ಈ  ವೈಜ್ಞಾನಿಕ  ಹಿನ್ನಲೆ ನನಗೆ ತಿಳಿಯದು . ಬರೆಯುತ್ತಾ ಹೋದರೆ  ಬಹಳಷ್ಟಿವೆ ನನ್ನಜ್ಜಿ ಹೇಳಿದ ವಿಷಯಗಳು , ಅವುಗಳನ್ನು ಇನ್ನೊಮ್ಮೆ ತಿಳಿಸುವೆ; ಆಗ್ಬಹುದಾ???

                                                                                 -ವಿಧಾತ್ರೀ. ಪಿ. ಎಸ್ .

5 comments:

  1. ಒಳ್ಳೆದಾಯಿದು ಕೂಸೆ. ಹೀಂಗೆ ಬರೆತ್ತಾ ಇರು

    ReplyDelete
  2. ಓಹ್..ಈ 'ಕೆಡ್ದಾಸ' ಹೇಳಿ ಒಂದು ಸಂಪ್ರದಾಯ ಇದ್ದು ಹೇಳಿ ಗೊಂತೇ ಇತ್ತಿಲ್ಲೆ ಅಕ್ಕಾ..

    ಬರಹ ಸೂಪರ್..

    ಮತ್ತೆ.. ನುಗ್ಗೆ~ಬದರೆ ಕೊದಿಲು ಎನಗಂತೂ ಭಾರೀ ಇಷ್ಟ ಆತ..

    ReplyDelete
  3. ಓಹ್..ಈ 'ಕೆಡ್ದಾಸ' ಹೇಳಿ ಒಂದು ಸಂಪ್ರದಾಯ ಇದ್ದು ಹೇಳಿ ಗೊಂತೇ ಇತ್ತಿಲ್ಲೆ ಅಕ್ಕಾ..

    ಬರಹ ಸೂಪರ್..

    ಮತ್ತೆ.. ನುಗ್ಗೆ~ಬದರೆ ಕೊದಿಲು ಎನಗಂತೂ ಭಾರೀ ಇಷ್ಟ ಆತ..

    ReplyDelete
  4. ಓಹ್..ಕೆಡ್ದಾಸ ಹೇಳಿ ಒಂದು ಸಂಪ್ರದಾಯ ಇದ್ದು ಹೇಳಿಯೇ ಗೊಂತಿತ್ತಿಲ್ಲೆ ಅಕ್ಕ..
    ಬರಹ ಸೂಪರ್..
    ಮತ್ತೆ.. ಎನಗಂತೂ ನುಗ್ಗೆ~ಬದನೆ ಕೊದಿಲು ಭಾರೀ ಇಷ್ಟ ಅಪ್ಪ..

    ReplyDelete
  5. ಹ. ರುಚಿ ಇರ್ತು ನುಗ್ಗೆ ಬದನೆ ಸಾಂಬಾರ್. ಅದೇ ರೀತಿ ಸೋಣ ಸಂಕ್ರಾಂತಿಯು ವಿಶೇಷ ಇರ್ತು.😃😃

    ReplyDelete