Saturday 15 February 2020

ಒಂದಿಷ್ಟು ಪುರಾವೆಯನ್ನೂ ಉಳಿಸದೆ ಇತಿಹಾಸದ ಪುಟ ಸೇರಿದ ಮುಗೇರಡ್ಕ ತೂಗು ಸೇತುವೆಯ ಕಥೆ!

ಮತ್ತೆ ಮರಳಿ ಬರುವೆನೆಂಬ  ಭರವಸೆಯಲಿ...




ಅದು 2013, ನಮ್ಮೂರ ಸರ್ಕಾರಿ ಶಾಲೆಯಲ್ಲಿ ಆಗ ನಾನಿನ್ನೂ ಹತ್ತನೇ ತರಗತಿಯಲ್ಲಿದ್ದೆ. ಹತ್ತನೆಯ ನಂತರ ಮುಂದೇನು ಎಂಬ ಪ್ರಶ್ನೆ ಸಾಮಾನ್ಯ. ಅದರಂತೆಯೇ ನನಗೂ ಅದೇ ಚಿಂತೆ ಮುಂದೇನು?
ಹೀಗೆ ಈ ಪ್ರಶ್ನೆಯೊಡನೆ ದಿನಗಳು ಉರುಳುತ್ತಾ...
'ವಿದ್ಯಾಭ್ಯಾಸವು ಸಾಗಿತ್ತು... ಕನಸಿನ ಮೂಟೆ ಬೆನ್ನ ಮೇಲಿತ್ತು'. ಆದರೇನು ಮಾಡುವುದು?! ವಿದ್ಯಾಭ್ಯಾಸ ಮುಂದುವರೆಸುವುದು ಹೇಗೆ ಎಂಬುದೇ ಪ್ರಶ್ನೆಯಾಗಿ ಉಳಿದಿತ್ತು. ಕಾರಣ  ನಮ್ಮೂರಿಗೆ ದಿನನಿತ್ಯ ಸಂಚಾರಕ್ಕೆ ಇದ್ದ ಅನಾನುಕೂಲತೆ. ನನ್ನ ಕಾಲೇಜು/ಮುಂದಿನ  ವಿದ್ಯಾಭ್ಯಾಸದ ಕನಸು ಎಲ್ಲಿ ಕನಸಾಗಿಯೇ ಉಳಿಯುವುದೇನೋ ಎಂದೆನಿಸಿತು.

ಆದರೆ ದೇವರ ದಯೆ ಎಂಬಂತೆ ; ಈ ಮೊದಲು ಸರಿಯಾದ ಸಂಪರ್ಕ ವ್ಯವಸ್ಥೆಯನ್ನು ಕಂಡಿರದ ಸುಂದರ ಹಾಗೂ ಕಾರಣಿಕ ಊರಾಗಿರುವ ಮುಗೇರಡ್ಕ ದಲ್ಲಿ... "ಜೀವನದಿಯ ತಟದಲ್ಲಿ ಜೀವನ ನೌಕೆಯನು" ನಡೆಸುತ್ತಾ ; ಬದುಕು ಕಟ್ಟಿಕೊಂಡಿದ್ದ ಜನರು 2013ರಲ್ಲಿ ತೂಗುಸೇತುವೆಯೊಂದಿಗೆ ಹೊಸದೊಂದು ಭರವಸೆಯೊಂದಿಗೆ ಬದುಕು ಆರಂಭಗೊಂಡಿತಲ್ಲದೇ, ಇದರ ಮೂಲಕವಾಗಿ ಅಭಿವೃದ್ಧಿಯತ್ತ ಮೊದಲ ಹೆಜ್ಜೆಯನು ಇಡುತ್ತಾರೆ.

ಆಗ ಮನಸಿಗಾದ ಖುಷಿ ಅಷ್ಟಿಷ್ಟಲ್ಲ. ಕಾರಣ ನನ್ನ ಕನಸಿನ ಮೊದಲ ಮೆಟ್ಟಿಲೇ ಅಥವಾ ಬುನಾದಿ ಎಂದರೆ ತಪ್ಪಲ್ಲ. ಕೇವಲ ನಾನೊಬ್ಬಳೇ ಅಲ್ಲ(ಸು ಸಂಪರ್ಕ ವ್ಯವಸ್ಥೆಯ ಕೊರತೆಯಿಂದಾಗಿ ವಿದ್ಯಾಭ್ಯಾಸ ಮೊಟಕುಗೊಳಿಸಿದವರು ಹೆಚ್ಚು ) ವಿದ್ಯಾರ್ಥಿಗಳು, ಉದ್ಯೋಗಿಗಳು, ಕೂಲಿ ಕಾರ್ಮಿಕರು ಮಾತ್ರವಲ್ಲದೇ ಬಾಲರಿಂದ ಹಿಡಿದು ವೃದ್ಧರವರೆಗೂ, ಊರಿನ ಎಲ್ಲರೂ ಖುಷಿಪಟ್ಟರು.

ಕಷ್ಟಗಳು ದೂರವಾದಾಗ ಖುಷಿ ಸಹಜ ತಾನೆ. ತೂಗುಸೇತುವೆ ಎಂಬುದು  ಭೌತಿಕವಾಗಿ ಕಣ್ಣಿಗೆ ಕಾಣುವ ಸಂಚಾರ ಮಾಧ್ಯಮ ಅಥವಾ ಗ್ರಾಮ - ಗ್ರಾಮಗಳ ಜೋಡಿಸುವ  ಕೊಂಡಿ ಮಾತ್ರವಲ್ಲ. ಅದು ಜನರ ಜೀವನಾಡಿ, ಊರಿನ ಜನರ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಭಾಂದವ್ಯಗಳ ಬೆಸೆಯುವ ಕೊಂಡಿಯೂ ಹೌದು.

ಊರ ಜನರಿಗದು ಜೀವನಾಧಾರದ ವ್ಯವಸ್ಥೆಯಾದರೆ, ಪೆನ್ನು ಹಿಡಿದು ಕುಳಿತವಗೆ ಬರಹಗಳಿಗೆ ಸ್ಫೂರ್ತಿ, ವಿದ್ಯಾರ್ಥಿಗಳಿಗದು ತಮ್ಮ ಕನಸಿನ ಆಗಸವನೇರಲಿರೋ ಮೆಟ್ಟಿಲು , ಹವ್ಯಾಸಿ ಛಾಯಾ-ಗ್ರಾಹಕನಿಗೆ ಪ್ರಕೃತಿ ಸೌಂದರ್ಯವ ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿಯಲು ಸಹಕರಿಸುವ ಸಹಾಯಕ,  ದೂರದ ಪ್ರವಾಸಿಗರ ಊರಿಗೆ ಕೈ ಬೀಸಿ ಕರೆದು ಅವರ  ಪ್ರಯಾಸವನಿಳಿಸೋ ಮಿತ್ರ ಹೀಗೆ ತೂಗುಸೇತುವೆಯೆಂಬುದು ನಮ್ಮೆಲ್ಲರ ಜೀವನದ ಒಂದು ಬಹುಭಾಗ ತುಂಬಿಹೋಗಿದ್ದ ಒಬ್ಬ ಒಡನಾಡಿ. 👈ಈ ಒಡನಾಡಿಯ  ಸಂಪರ್ಕವಾದದ್ದು - ನಮ್ಮ ರಾಜ್ಯದಲ್ಲಿ  ಮುಖ್ಯಮಂತ್ರಿ ಯಡಿಯೂರಪ್ಪನವರ ಸರ್ಕಾರವಿದ್ದಾಗ. ಶ್ರೀಯುತ ಗಿರೀಶ್ ಭಾರದ್ವಾಜರ ನೇತೃತ್ವದಲ್ಲಿ ನಿರ್ಮಾಣಗೊಂಡು ಪರಿಚಯವಾದ. ಆದರೆ ಇಂದು
ನಮ್ಮೆಲ್ಲರ ಜೀವನಾಡಿಯಾಗಿದ್ದ ಆ ಒಡನಾಡಿ ಪ್ರಕೃತಿಯ ಕೋಪಕ್ಕೆ ತುತ್ತಾಗಿ (ಆಗಸ್ಟ್  9, 2019 ರ ಭಾರೀ ಮಳೆಗೆ) ಒಂದಿಷ್ಟೂ ಪುರಾವೆ ಯನ್ನು ಉಳಿಸದೆ ನಾಶ ಹೊಂದಿದ ಮುಗೇರಡ್ಕ ತೂಗುಸೇತುವೆ ಅವಳದೇ ಮಡಿಲಿನಲ್ಲಿ ಬಿದ್ದಿದ್ದಾನೆ.

ಊರಿನಲ್ಲಿ ಡೈರಿಗೆ ಹಾಲು ಹಾಕುವ ಕೃಷಿಕರು, ಅವಸರದಲ್ಲಿ ತಡವಾಯಿತೆಂದು ಕಿಲೋಮೀಟರ್ ಗಟ್ಟಲೆ ನಡೆದು ಬಂದು; ಓಡಿ ಹೋಗಿ ಬಸ್ಸನ್ನೇರುವ ಶಾಲಾ- ಕಾಲೇಜು ವಿದ್ಯಾರ್ಥಿಗಳು, ಪುಟ್ಟ ಬ್ಯಾಗನು ಹೆಗಲಿಗೇರಿಸಿ ಪೋಷಕರ ಕೈಹಿಡಿದು ಶಾಲಾ ವಾಹನವ ಕಾಯುವ ಭವಿಷ್ಯ- ಬಿಂದುಗಳು, ಊರಿನೊಳಗಿನ ಸರ್ಕಾರಿ ಶಾಲೆಗೆ ಪಾಠಮಾಡಲು ಬರುವ ಅಧ್ಯಾಪಕರು, ದಿನಗೂಲಿ ಕಾರ್ಮಿಕರು/ಕೆಲಸಗಾರರು, ಮಹಿಳೆಯರು, ಮಕ್ಕಳು ಹೀಗೆ ಅಂದು ದಿನ ಬೆಳಗಾದರೆ ತೂಗುಸೇತುವೆಯೊಂದಿಗೆ ಆರಂಭವಾಗುತ್ತಿದ್ದ...ತೂಗು ಉಯ್ಯಾಲೆಯಂತಿಹ ಈ ಬದುಕು ; ಇಂದು ಬಿದ್ದಿರುವ ತೂಗುಸೇತುವೆಯ ಮುಂದೆ ಭಾರವಾಗಿ ಸಾಗಲೇ ಬೇಕಾದ  ಪರಿಸ್ಥಿತಿ ಉಂಟಾಗಿದೆ.

ಆದರೆ ನಾವೆಲ್ಲರೂ ಪುನಃ ನಿರೀಕ್ಷೆಯಲ್ಲಿ ಇದ್ದೇವೆ. ರಾಜ್ಯದಲ್ಲಿ ಮತ್ತದೇ ಯಡಿಯೂರಪ್ಪನವರ ಸರ್ಕಾರವಿದೆ. ಗಿರೀಶ್ ಭಾರದ್ವಾಜ್ ರ ನೇತೃತ್ವದಲ್ಲಿ ಪುನಃ ತೂಗುಸೇತುವೆಯು ನಿರ್ಮಾಣಗೊಂಡು ನಮ್ಮ ಒಡನಾಡಿ "ಮತ್ತೆ ಮರಳಿ ಬರುವನೆಂಬ ಹೊಸ ಭರವಸೆಯಲಿ".

✍️ನೇತ್ರಾವತಿ ತೀರದಿಂದ.


ಮೇಲಿನ ಲೇಖನ ಓದಿದ ಮೇಲೆ ನಿಮ್ಮ ಊರಿನ ಸಂಚಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದಲ್ಲವೇ?!! ಎಂದು ನೀವೆಲ್ಲ ಕೇಳಬಹುದು. ಖಂಡಿತಾ ಕಂಡುಕೊಳ್ಳಬಹುದು ಆದರೆ ಶಾಶ್ವತವಾದ ಸಂಪರ್ಕ ವ್ಯವಸ್ಥೆ ಆಗಲು ತೆಗೆದುಕೊಳ್ಳುವ ಸಮಯ ಕನಿಷ್ಠ  ಎಂದರೆ ನಾಲ್ಕೈದು ವರುಷಗಳು ಬೇಕೇ ಬೇಕು. ಆಗ ಅಲ್ಲಿಯವರೆಗೂ ಸಾಮಾನ್ಯ (ಜೂನ್ - ಅಕ್ಟೋಬರ್ ತಿಂಗಳವರೆಗೆ) ಅಂದರೆ ಮಳೆಗಾಲದಲ್ಲಿ ಸಂಚಾರದ ವ್ಯವಸ್ಥೆ ನಮ್ಮ ಊರಿನದ್ದು ದೊಡ್ಡ ಪ್ರಶ್ನಾರ್ಥಕವೇ ಆಗಿರುತ್ತದೆ. ಕಾರಣ ಮೊದಲಿನ ಹಾಗೆ ದೋಣಿ ಇಲ್ಲ. ಅಕಸ್ಮಾತ್ ದೋಣಿ ವ್ಯವಸ್ಥೆ ಅಥವಾ ಬೋಟ್ ವ್ಯವಸ್ಥೆ ಮಾಡಿದರೂ ಅದು ದೊಡ್ಡ ಮಳೆಗಾಲದಲ್ಲಿ ಸಂಚಾರ ಅಸುರಕ್ಷಿತ. ಇದಕ್ಕೆ ಕಾರಣ ಅದಾಗಲೇ ವ್ಯವಸ್ಥೆ ಮಾಡಿರುವ ಬೋಟ್ ನ ಬಳಿ ತೆರಳಬೇಕಾದರೂ ನದಿಯ ಸ್ವಲ್ಪ ಭಾಗ ದಾಟುವುದು ಅನಿವಾರ್ಯವೇ ಆಗಿದೆ. ಮಳೆ ಬಂದ ಸಂಧರ್ಭದಲ್ಲಿ ನದಿ ನೀರಿನ ಪ್ರಮಾಣ ಮತ್ತು ಸೆಳೆತ ಅಧಿಕವಾಗಿರುತ್ತದೆ. ಆದ ಕಾರಣ ದಾಟುವುದು ಅಪಾಯ.( ಪ್ರಸ್ತುತ ಸಮಸ್ಯೆಯನ್ನು ಅನುಭವಿಸಿದವಳಾಗಿ ಇದನ್ನಿಂದು ಬರಹ ರೂಪಕ್ಕಿಳಿಸಿರುವೆ).

ನಮ್ಮ ಊರಿನಲ್ಲಿ ಆಗ ಬೇಕಾದ ಅಭಿವೃದ್ಧಿ ಕಾರ್ಯಗಳು ಬೇಕಾದಷ್ಟಿವೆ. ಏಕೆಂದರೆ ಸ್ವಾತಂತ್ರ್ಯ ಕಳೆದು ಅದೆಷ್ಟು ವರುಷ ಕಳೆದರೂ ಒಂದು ಜಲ್ಲಿಕಲ್ಲು ಬೀಳದ ರಸ್ತೆಗಳಿವೆ. ಹೇಳಲು ಹೋದರೆ ಪಟ್ಟಿ ದೊಡ್ಡದೇ ಇದೆ. ಆದರೆ ಅದು ಇಲ್ಲಿ ಅವಶ್ಯವಿಲ್ಲ.   ಅಭಿವೃದ್ಧಿ ಬೇಕು ಆದರೆ ಅದು ಮಿತಿ ಮೀರಬಾರದೆಂಬುದು ಆಶಯ. ಈಗ ಬಂದೊದಗಿರುವ ಪರಿಸ್ಥಿತಿಗೆ ಕಾರಣಗಳನ್ನು ಹುಡುಕುತ್ತಾ ಹೋಗಿ ಅವಲೋಕಿಸಿದರೆ ಅಂದು ಪ್ರಕೃತಿಯ ಆ ರೀತಿಯ ಕೋಪಕ್ಕೆ ಮನುಷ್ಯರಾದ ನಾವೇ ಕಾರಣರು ಎಂಬುದು ತಿಳಿಯುತ್ತದೆ. ಅದೇನೇ ಇದ್ದರೂ ಪರಿಸ್ಥಿತಿಗೆ ಅನುಗುಣವಾಗಿ
ನಮಗೆ ಮೊದಲನೆಯದಾಗಿ ಆಗಬೇಕಿರುವುದು ಸುರಕ್ಷಿತ ಸಂಚಾರ ವ್ಯವಸ್ಥೆ(2020 ರ ಮಳೆಗಾಲದ ಮೊದಲು) .

"ಗ್ರಾಮಗಳನ್ನು ಸಂಧಿಸುವ/ಜೋಡಿಸುವ ತೂಗುಸೇತುವೆಯಲಿ ಜನರ ಬದುಕಿನ ಬಂಡಿ ನಿಂತಿದೆ. ಆದ್ದರಿಂದ ಕೇವಲ ನಾವು ಮಾತ್ರವಲ್ಲ ನಮ್ಮ ಒಡನಾಡಿಯಾದ ತೂಗುಸೇತುವೆಯೂ ಕೂಡ... ಮತ್ತೆ  ಸಹಜ (ಮೊದಲ) ಸ್ಥಿತಿಗೆ ಮರಳುವೆವು ಎಂಬ ನಿರೀಕ್ಷೆಯಲ್ಲಿ....ಅದನ್ನು ನೆರವೇರಿಸುವ ಜವಾಬ್ದಾರಿ ಸರ್ಕಾರದ ಕೈಯಲ್ಲಿ."

ಇದು  ಕಳೆದ ಮಳೆಗಾಲದಲ್ಲಿ (09 ಆಗಸ್ಟ್ 2019 ರಂದು) ಒಂದಿಷ್ಟು ಪುರಾವೆಯನ್ನೂ ಉಳಿಸದೆ ಇತಿಹಾಸದ ಪುಟ ಸೇರಿದ ಮುಗೇರಡ್ಕ ತೂಗು ಸೇತುವೆಯ ಕಥೆ.
         
     

           'ಮತ್ತೆ ಮರಳಿ ಬರುವೆನೆಂಬ ಭರವಸೆಯಲಿ'

                               - ಇಂತೀ ನಿಮ್ಮವನು
                               - ತೂಗುಸೇತುವೆ😊









No comments:

Post a Comment