Monday 4 October 2021

ಮಧ್ಯರಾತ್ರಿಯ ಮ್ಯಾಗಿಯ ಕಥೆ

               ಮಧ್ಯರಾತ್ರಿಯ ಮ್ಯಾಗಿಯ ಕಥೆ





ಈ ಶೀರ್ಷಿಕೆಯೇ ಬಹಳ ವಿಚಿತ್ರವಾಗಿದೆ ಅಲ್ವಾ...!?ಈ ಯೋಚನೆ ಸಹಜ ಬಿಡಿ. ಕಾರಣ ಶೀರ್ಷಿಕೆಯಲ್ಲಿರುವ ಮಧ್ಯರಾತ್ರಿ...ಮ್ಯಾಗಿ ಇವೆಲ್ಲವೂ ಸಂಬಂಧವಿಲ್ಲದ ಪದ ಮತ್ತು ವಿಷಯಗಳಾಗಿವೆ.

ಹಾಗಾದರೆ ಈ ನಂಟಿಲ್ಲದ ವಿಷಯಗಳು....ನೆನಪಿನ ಗಂಟನು ಸೇರಿದ ಆ ಘಟನೆಯನು ತಿಳಿದಾಗ.... ಶೀರ್ಷಿಕೆಯ ಕುರಿತಾಗಿ ಬಂದ ಪ್ರಶ್ನೆಗಳಿಗೆ ಉತ್ತರ ಖಚಿತ...ಮತ್ತೇಕೆ ತಡ....ಬನ್ನಿ ನಿಮಗೂ ಕೂಡ ತಿಳಿಸುವೆ 😀


ಅಜ್ಜಿಯಿಲ್ಲದ ಮನೆ ಮಜ್ಜಿಗೆ ಇಲ್ಲದ ಊಟದಂತೆ...ಎಂಬ ಗಾದೆ ಮಾತು ನಾವೆಲ್ಲ ಕೇಳಿದ್ದೇವೆ. ಅಂತೆಯೇ ಒಂದು ಹಳ್ಳೀ ಮನೆ ಎಂದಾಗ ಸಾಮಾನ್ಯವಾಗಿ 

ಹಿರಿಯರು - ಕಿರಿಯರು ಸಹಜ ಮತ್ತು ಹಾಗಿದ್ದರೆ ಹೀಗಿದ್ದ ಕೆಲವೊಂದು ಮಜಾ ವಿಷಯಗಳು ಆಗೋದು ಕೂಡ. ಅದರ ಬಗ್ಗೆ ಇನ್ನೊಮ್ಮೆ ಮಾತಾಡೋಣ. ನಾನಿಂದು ನಿಮ್ಮಲ್ಲಿ ಹೇಳ ಹೊರಟಿರುವುದು ಕೂಡ ಅಂತಹದೇ ವಿಷಯಕ್ಕೆ ಸಂಬಂಧಿಸಿದ ಅಜ್ಜಿ ಮತ್ತು ಮೊಮ್ಮಕ್ಕಳ ನಡುವೆ ನಡೆದ ಒಂದು ಮಾಸಿ ಹೋಗದ ಮಜಾ ಕತೆ.


ಮ್ಯಾಗಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಪ್ರಸ್ತುತ ತಲೆಮಾರಿನ ಮಕ್ಕಳಿಗೆ ಅಂತೂ ಬಲು ಪ್ರಿಯ. ಹಾಗಂತ 25 -30 ವರುಷ ದಾಟಿದವರಿಗೆ ಇಷ್ಟವಿಲ್ಲ ಎಂದಲ್ಲ. ಆದರೂ ಸರ್ವೇ ಸಾಮಾನ್ಯವಾಗಿ ಮಕ್ಕಳಿಗೆ ಬಲು ಪ್ರೀತಿ ಅಷ್ಟೆ. ಅಂತೆಯೇ ನನಗೂ ನೂಡಲ್ಸ್ ಅಥವಾ ಮ್ಯಾಗಿ ಎಂದರೆ ಇಷ್ಟ. ಒಂದಿನ ರಾತ್ರಿ ಮನೆಯಲ್ಲಿ ಎಲ್ಲರೂ ಮಲಗಿದ್ದ ಸಮಯವದು. ನಾನು ಮತ್ತು ತಂಗಿ ಇಬ್ಬರೇ ಏನೋ ನಮ್ಮ ಅಳಿದುಳಿದ ಕಾರ್ಯನಿಯೋಜನೆಯನ್ನು (assignments) ಬರೆಯುವ ಕೆಲಸದಲ್ಲಿದ್ದೆವು ಅದರ ನಡುವೆ ಒಂಚೂರು ಹಸಿವು ಮತ್ತು ಏನಾದರೂ ತಿಂಡಿ ಇದ್ದರೆ ಒಳ್ಳೆದಿತ್ತು ಎಂಬ ಭಾವನೆ. ಇಬ್ಬರೂ ಮಾತಾಡಿಕೊಂಡು ಏನಾದರೊಂದು ಮಾಡಿ ತಿನ್ನೋಣ ಎಂಬ ನಿರ್ಧಾರದೊಂದಿಗೆ ಸದ್ದಿಲ್ಲದೆ ಅಡಿಗೆ ಮನೆಗೆ ನಡೆದೆವು. 

ಏನಾದರೊಂದು ಮಾಡಿ ತಿನ್ನುವುದೇನೋ ಸರಿ.. ಆದರೆ ಸದ್ದಿಲ್ಲದೆ ಮಾಡಿ ತಿನ್ನುವುದು ಹೇಗೆ ಎಂಬುದೇ ನಮಗಿರುವ ಸವಾಲಾಗಿತ್ತು. 

ಕಾರಣ.... ನಡುರಾತ್ರಿ ಎದ್ದು ತಿಂಡಿ ಮಾಡಿ ಎಲ್ಲ ತಿನ್ನುವ ಅಭ್ಯಾಸ ಇಲ್ಲ ಒಂದು ಕಾರಣವಾದರೆ..ಇನ್ನೊಂದು ಮನೆಯಲ್ಲಿ ಹಿರಿಯರಿಗೆ ಗೊತ್ತಾದರೆ...ರಾತ್ರಿ ಸರಿ ಊಟ ಮಾಡಬಹುದಿತ್ತಲ್ಲ...ಹಾಗೆಲ್ಲ ಮಧ್ಯರಾತ್ರಿ ಎದ್ದು ಹೊತ್ತಲ್ಲದ ಹೊತ್ತಿನಲ್ಲಿ ಅಡಿಗೆ ಮಾಡಬಾರದು...ಎಂತ ನಿಮ್ಮದು ಎಂಬ ಮಾತುಗಳು ಕೇಳಿಬರುವುದು.

ಆದ ಕಾರಣ ಅಂತೂ ಇಂತೂ ಮಾಡಲು ಸುಲಭವೂ ತಿನ್ನಲು ಸ್ವಾದಿಷ್ಟವಾದ ಮ್ಯಾಗಿ ಮಾಡುವುದೆಂದು ಹೊರಟೆವು. ಬೇಗ ಬೇಗನೆ... ಪ್ಯಾಕೆಟ್ ಓಪನ್ ಮಾಡಿ ಮ್ಯಾಗಿ ತಯಾರು ಮಾಡುವಾಗ ಮಧ್ಯೆ ತರಕಾರಿಗಳ ಸೇರಿಸಿದರೆ ಚೆನ್ನಾಗಿ ಆಗುತ್ತಲ್ಲ ಎಂದು ಅದನ್ನು ಸೇರಿಸಿ ಮ್ಯಾಗಿ ತಯಾರಿ ಮಾಡಿದೆವು.

ಅಷ್ಟರಲ್ಲಿ ನಮ್ಮ ಅಜ್ಜಿ ನೀರು ಕುಡಿಯಲೆಂದು ಎದ್ದಿದ್ದರು🙉ಅಡಿಗೆ ಮನೆಯ ಬಳಿ ಬಂದು...ಏನೋ ಬೇಯಿಸಿದ , ಗ್ಯಾಸ್ ಆನ್ ಮಾಡಿರುವ ಸೂಚನೆ ಇದೆಯಲ್ಲ ಎಂದರು...ನಾವು ಏನೂ ಆಗಿಲ್ಲವೆಂಬಂತೆ ಇದ್ದವು. ಅಜ್ಜಿಯ ಕಣ್ತಪ್ಪಿಸಿ ಇಬ್ಬರೂ ಮ್ಯಾಗಿಯ ತಟ್ಟೆಯೊಂದಿಗೆ ಓದುವ ರೂಮಿಗೆ ಓಡಿ ...ಬಂದು ಇಬ್ಬರೂ ಆರಾಮವಾಗಿ ಹರಟೆ ಹೊಡೆಯುತ್ತಾ ಮ್ಯಾಗಿ ತಿನ್ನುತ್ತಿದ್ದೆವು. ಅಷ್ಟಾಗಲೇ ಅಜ್ಜಿಯೂ ನಮ್ಮ ಬೆನ್ನ ಹಿಂದೆ ಬಂದು ನಿಂತಿರುವುದು ಗೊತ್ತಾಗಿ...ತಿನ್ನುತ್ತಿದ್ದ ಮ್ಯಾಗಿ ತಟ್ಟೆಯನ್ನು ಅಲ್ಲೇ ಇದ್ದ ಮೇಜಿನ ಕೆಳಗಿಟ್ಟು ಪುಸ್ತಕ ಬಿಡಿಸಿದೆವು.

ರೂಮಿನ ಬಳಿ ಬಂದಿದ್ದ ಅಜ್ಜಿ...ಮಕ್ಕಳೇ ಗ್ಯಾಸ್ ಆನ್ ಮಾಡಿದ ಹಾಗೆ ನನ್ನ ಮೂಗಿಗೆ ಏನೋ ವಾಸನೆ ಬರುತ್ತಿದೆಯಲ್ಲ.....ಏನು ಮಾಡಿದ್ದೀರಿ ಎಂದು ವಿಚಾರಿಸಿದರು...

ನಾವು, ಏನಿಲ್ಲ ಅಜ್ಜಿ...ಈ ಹಿಂದೆ ಹೊತ್ತಲ್ಲದ ಹೊತ್ತಲ್ಲಿ ತಿಂಡಿ ಮಾಡಿ ತಿನ್ನಬಾರದು ಎಂದು ನೀವೇ ಹೇಳಿದ್ದೀರಲ್ಲ...ಮತ್ತೇನು ಮಾಡಲಿ??!!.... ನಾವು ಎಂದು ಉತ್ತರಿಸಿದೆವು😁😬😜👍🏻

ನಮ್ಮ ಉತ್ತರ ಕೇಳಿ ಅಜ್ಜಿ ಏನೋ ವಾಪಾಸು ಮಲಗಲು ಹೋದರು... ನಾವು ಪುನಃ ಮೇಜಿನ ಕೆಳಗಿಟ್ಟಿದ್ದ ತಟ್ಟೆ ತೆಗೆದುಕೊಂಡು ಮ್ಯಾಗಿ ತಿನ್ನಲಾರಂಭಿಸಿದೆವು... ಜೊತೆಗೆ ನಗು ತಡೆಯಲಾಗಲಿಲ್ಲ 🥳😁 ಹಾಗೂ ಅಂತೂ ಇಂತೂ ಅಂದು ಕೊಂಡ ಹಾಗೆ ತಿಂಡಿಯ ಕೆಲಸವೂ ಆಯಿತು ಅದರೊಂದಿಗೆ...ಅಜ್ಜಿಯ ಪರಂಚಾಣದಿಂದ ತಪ್ಪಿಸಿಕೊಂಡು ತಟ್ಟೆ ತುಂಬ ಇದ್ದ ಮ್ಯಾಗಿಯನ್ನು ತೃಪ್ತಿಯಿಂದ ತಿಂದೆವು ಎಂಬ ಮಾತು ಮನದೊಳಗೆ ಇತ್ತು.

 ಹೀಗೆ ನೀವು ಕೂಡ ನಿಮ್ಮ ಜೀವನದಲ್ಲಿ ಅಜ್ಜಿಯ , ಅಜ್ಜನ, ಶಿಕ್ಷಕರ ಕಣ್ಣು ತಪ್ಪಿಸಿ ಮಾಡಿದ ಅದೆಷ್ಟೋ ಸಣ್ಣ ಪುಟ್ಟ ಚೇಷ್ಟೆ , ಕೆಲಸಗಳಿಗೆ ಲೆಕ್ಕವಿರದು 😃


ಆದರೆ ಅದೆಲ್ಲವೂ ಮರೆಯಲಾಗದ ನೆನಪಾಗಿ ಉಳಿದು ...ಮುಂದೊಂದು ದಿನ ನೆನಪುಗಳು ಮರುಕಳಿಸಿದಾಗ ಮೊಗದೊಳು ನಗುವ ತರುವುದು ಅಂತೂ ನಿಜ.



ಇಂತಹುದೇ ನೆನಪುಗಳು ನಿಮ್ಮ ಬದುಕಿನಲ್ಲೂ ಇದ್ದರೆ ಹಂಚಿಕೊಳ್ಳಲು ಮರೆಯದಿರಿ...ಆಯ್ತಾ 

ಹೀಗೆ ಮರೆಯಲಾಗದ ವಿಷಯಗಳು ನೆನಪಾದಾಗ ನಿಮ್ಮೊಂದಿಗೆ ಹಂಚಿಕೊಳ್ಳಲು ಮತ್ತೊಮ್ಮೆ ಬರುವೆ 🙂



✍️ ನೇತ್ರಾವತಿ ತೀರದಿಂದ.





No comments:

Post a Comment