Friday 13 April 2018

ಬಂದಾ ಬಂದಾ ಮಳೆರಾಯ

                            ಬಂದಾ ಬಂದಾ ಮಳೆರಾಯ

ಬಿರು ಬೇಸಿಗೆಯಲ್ಲಿ ಕಾದು ಕೆಂಪಾಗಿ; ಬಾಯಿಯೊಡೆದು ಹಸಿದು ಕುಳಿತಿರುವ ನೆಲಕ್ಕೆ ...' ಟಪ್ '  ಎಂದು  ಆಗಸದಿಂದ ಮಳೆಹನಿಯು ಬಿದ್ದಾಗ ಮಣ್ಣು ಹೊರಸೂಸುವ ಸುವಾಸನೆ !!!
ಅದಾಗ ತಾನೇ ಮುಗಿದಿರುವ ಬೇಸಿಗೆ; ಬೆಂದು ಹೋಗಿರುವ ಪ್ರಕೃತಿಯ ಒಡಲಿನ ಜೀವಗಳಿಗೆ ಪುನರ್ ಜನ್ಮ ನೀಡಲು ಬಂದಿರುವ ಮಳೆರಾಯ. 
                  ಮಳೆಗಾಲ ....! ಬಳಲಿರುವ ಜೀವಕೆ ತಂಪನ್ನೆರೆಯುವುದಲ್ಲದೇ ; ಜೀವದೊಳಗೆ ಹುದುಗಿದ ಭಾವನೆಗಳಿಗೆ,                            ಕವಿತ್ವದ ಮನಸುಗಳಿಗೆ , ಚಿಣ್ಣರಿಗೆ , ಅನ್ನವ ನೀಡೋ ರೈತನಿಗೆ, ಪಶು-ಪಕ್ಷಿಗಳಿಗೆ ....ಅಷ್ಟೇ ಏಕೆ ; ಸಕಲ ಜೀವ                    ಚರಾಚರಗಳಲ್ಲಿ ಜೀವ-ಸಂಚಾರ ಹಾಗೂ ಜೀವಕಳೆ  ಮೂಡಿಸುವುದು ಮಳೆ.
ಇಷ್ಟೆಲ್ಲಾ ಮಾಡೋ ಮಳೆರಾಯ ಮನದಲ್ಲಿರುವ ಭಾವನೆಗಳಿಗೆ ಬಣ್ಣ -ಹಚ್ಚಿ  ಮನಸಿನೊಳದಾಗ ಚಿತ್ತಾರವ ಬಿಡಿಸೋ ಚಿತ್ರಕಾರ ನಮ್ಮ ಮಳೆರಾಯ . ಮನೆಗೆ ಬರುವ ಅತಿಥಿಗೆ ಸತ್ಕರಿಸಲು ನಡೆಸುವ ತಯಾರಿಯಂತೆಯೇ ಥೇಟ್ ! ತಯಾರಿ ನಮ್ಮ ಹಳ್ಳಿಗಳಲ್ಲಿನ ಮನೆಯ ಹಿರಿಯರು ನಡೆಸುವುದು ರೂಢಿ . 
                   ಜೋರಾಗಿ ಮಳೆ ಬರುವಾಗ ಕುರುಮ್ -ಕುರುಮ್ ತಿನ್ನಲು ತಯಾರಿಸೋ ಹಲಸಿನಕಾಯಿ ಹಪ್ಪಳ, ಊಟಕ್ಕೆ ನೆಂಚಿಕೊಳ್ಳಲು ತರ ತರಹದ ಸಂಡಿಗೆ, ಉಪ್ಪಿನ ನೀರಿನಲ್ಲಿ ಅಜ್ಜಿ ಶೇಖರಿಸಿಟ್ಟ ಮಾವಿನಕಾಯಿ ,ಹಲಸಿನ ತೊಳೆ ;    ಗೇರುಬೀಜ ,ಹಲಸಿನ ಬೇಳೆ ಹೀಗೆ  ಇಷ್ಟೇ  ಅಲ್ಲ ಬರೆಯುತ್ತಾ ಹೋದರೆ ಬಹಳಷ್ಟಿವೆ. 

                   ಇದರೊಂದಿಗೆ ಕಾಗದದದೋಣಿಗಳನ್ನು ಮಾಡಿ ನೀರಿನಲ್ಲಿ ಬಿಡುವ ಮಜಾ .... ಕೆಸರುನೀರಿನೊಳಗಿಳಿದು ಆಡುವ ಆಟ, ಮಳೆಯಲ್ಲಿ ನೆನೆದಾಗ ಒಗ್ಗರಣೆಯಂತೆ ಚಟಚಟ ಎಂದು  ಮನೆಯ ಒಳಗಿಂದ ಕೇಳಿಸಿಕೊಳ್ಳುವ ಹಿರಿಯರ ಬೈಗಳುಗಳು  ಅದರ ಗಮ್ಮತ್ತೇ ಬೇರೆ....!!
ಹೇಳುತ್ತಾ ಹೋದರೆ ಮುಗಿಯದಷ್ಟು ನೆನಪುಗಳನ್ನು,ಸಂತೋಷದ ಸವಿಕ್ಷಣಗಳನ್ನು ಹೊತ್ತುತರುವ ಗೆಳೆಯ ಮಳೆರಾಯ ....!


                                                                                                                     - ವಿಧಾತ್ರೀ ಪಿ ಎಸ್ 




No comments:

Post a Comment