Saturday, 15 August 2020

✍️ತೋಚಿದ್ದು.... ಗೀಚಿದ್ದು -8







 

ಕಳೆಯಿತು ಇಂದು ಒಂದು ವರುಷ ನಿನ್ನ ನೆನಪಿನಲ್ಲೇ.

ಕಳೆಯಿತು ಇಂದು ಒಂದು ವರುಷ ನಿನ್ನ ನೆನಪಿನಲ್ಲೇ. ಕಾರಣ ಕಣ್ಣ ಮುಂದೆ ನಡೆದು ಹೋಗುವ ಕೆಲವೊಂದು ಘಟನೆಗಳು ಅಚ್ಚಳಿಯದೆ ಉಳಿಯುವವು. ದೋಣಿಯ ಮೂಲಕ ಜೀವನ ಬಂಡಿಯನು ನಡೆಸುತ್ತಿದ್ದ ನಮ್ಮೂರಿಗೆ 2013ರಲ್ಲಿ ಪರಿಚಯವಾದ ಸ್ನೇಹಿತ ನೀನು.

ಬಹಳ ವರ್ಷಗಳ ಬಳಿಕ ಬದುಕಿನ ಒಡನಾಡಿಯಾಗಿ ಊರಿಗೆ ಬಂದ ನಿನ್ನನ್ನು ; ಕೆಲವು ಮನಸುಗಳ ಬಡಿದಾಟದಿಂದ ಸರಿಯಾಗಿ ಬರಮಾಡಿಕೊಳ್ಳಲು ಆಗಲೇ ಇಲ್ಲ. ಆದರೂ ನೀನು ಏಳು ವರ್ಷಗಳ ಕಾಲ ನಮ್ಮ ಬದುಕಿನ ಏಳುಬೀಳುಗಳಲ್ಲಿ ಒಡನಾಡಿಯಾಗಿ, ಪೆನ್ನು ಹಿಡಿದು ಕುಳಿತವಗೆ ಬರಹಗಳಿಗೆ ಸ್ಫೂರ್ತಿಯಾಗಿ, ವಿದ್ಯಾರ್ಥಿಗಳಿಗೆ ತಮ್ಮ ಕನಸಿನ ಆಗಸವನೇರಲಿರೋ ಮೆಟ್ಟಿಲಾಗಿ, ಪ್ರವಾಸಿಗರನು ಊರಿಗೆ ಕೈ ಬೀಸಿ ಕರೆದು ಅವರ ಪ್ರಯಾಸವನಿಳಿಸೋ ಮಿತ್ರನಾಗಿ, ಊರಿಗೆ ಸಂಪರ್ಕ ಸೇತುವೆಯಾಗಿ ಜೀವನಾಧಾರದ ವ್ಯವಸ್ಥೆಯಾದೆ. 

ಇಂದು ಮತ್ತದೇ ದಿನ ಮರಳಿ ಬಂದಿದೆ, ನಿನ್ನೊಂದಿಗೆ ಕಳೆದಿಹ ಮರೆಯಲಾಗದ ನೆನಪುಗಳು ಮರುಕಳಿಸುತ್ತಿವೆ. ಆ ದಿನವೇ ಆಗಸ್ಟ್ 09/08/2019 ಅಂದರೆ ಇಂದು. ಆಶ್ಲೇಷ ಮಹಾನಕ್ಷತ್ರ ಸಮಯದಲ್ಲಿ ಸುರಿದ ಭಾರೀ ಮಳೆಗೆ ಮನಸಿನಿಂದ ಮಾಸಲಾಗದಂತಹ ಘಟನೆ ನಡೆದು ಹೋಗಿ ಜೀವನಾಧಾರವಾಗಿದ್ದ ತೂಗುಸೇತುವೆಯ ಕೊಂಡಿಯು ಕಳಚಿಕೊಂಡಿತ್ತು . 

ಕೆಲವೊಂದು ಬಾರಿ ವಾಸ್ತವವಾಗಿ ಪರ್ಜನ್ಯ ನ ಕೋಪಕ್ಕೆ ತುತ್ತಾಗಿ ತೂಗುಸೇತುವೆಯನ್ನು ಕಳೆದುಕೊಂಡೆವು ಎನ್ನುವುದಕ್ಕಿಂತ ನಾವು ಮಾಡಿದ ಕೆಲಸದಿಂದಾಗಿ ಕಳೆದುಕೊಂಡಿದ್ದೇವೆ ಎಂದೆನಿಸುತ್ತದೆ(ಕಳೆದುಕೊಳ್ಳುತ್ತೇವೆ ಕೂಡ).

ಅದೇನೇ ಇರಲಿ ತುಂಬಿ ಹರಿವ ನೇತ್ರಾವತಿಯ ತೀರದಿ ಬದುಕನ್ನು ಕಟ್ಟಿಕೊಂಡಿರುವ ನಮ್ಮ ಊರಿಗೆ ನಿನ್ನೆ ಬಂದ 'ಸುದ್ದಿ'ಯಲ್ಲಿ ಮನಸದು ಹರುಷದಿ ತುಂಬಿದೆ. ಅದಕ್ಕೆ ಕಾರಣವೂ ನೀನೆ ಏಕೆಂದರೆ ನೀನು ಮತ್ತೆ ಮರಳಿ ಬರುತ್ತಿದ್ದೀಯ ❤️😍.

ವಿಷಾದವಿದೆ ಇಂದು ನಿನ್ನ ಕಳೆದು ಕೊಂಡ ದಿನವು ಹೌದು👍ಮತ್ತೆ ಜೀವನದಿ ಒಡನಾಡಿಯಾಗಿ ಹುಟ್ಟಿ ಬರುವೆ ಎಂದು ಸಿಹಿಸುದ್ದಿ ಕೇಳಿದ ದಿನವೂ ಹೌದು 😍.


 ✍️ನೇತ್ರಾವತಿ ತೀರದಿಂದ.


🤩 "ಮತ್ತೆ ನಾನು ಹುಟ್ಟಿ ಬರುವೆ  ಬದುಕಿನಲಿ ಹೊಸ ಭರವಸೆಗಳ ಹೊತ್ತು ತರುವೆ"🤩


✍️ಇಂತೀ ನಿಮ್ಮವನು


-ತೂಗುಸೇತುವೆ 😍





Monday, 29 June 2020

ಏನಾದರೂ ಮಾಡಿ ನಮ್ಮ ಊರನ್ನು ಅಭಿವೃದ್ಧಿ ಹೆಸರಿನಲ್ಲಿ ಹಾಳು ಮಾಡದಿರಿ.

ಏನಾದರೂ ಮಾಡಿ ನಮ್ಮ ಊರನ್ನು 
ಅಭಿವೃದ್ಧಿ ಹೆಸರಿನಲ್ಲಿ ಹಾಳು ಮಾಡದಿರಿ. 


ಏನಾದರೂ  ಮಾಡಿ ನಮ್ಮ ಊರನ್ನು ಅಭಿವೃದ್ಧಿ ಹೆಸರಿನಲ್ಲಿ ಹಾಳು ಮಾಡದಿರಿ. ಅಗತ್ಯಕ್ಕೆ ತಕ್ಕಷ್ಟು ಸೌಲಭ್ಯ ನೀಡಿ ಸಾಕು. ಹಳ್ಳಿ ಹಳ್ಳಿಯಾಗಿದ್ದರೆ ಚಂದ❤️ ಪೇಟೆ ಪೇಟೆಯಾಗಿ ಇದ್ದರೆ ಅಂದ👍 ಅದರ ಅರ್ಥ ಅಭಿವೃದ್ಧಿ ಬೇಡ ಎಂದಲ್ಲ. ಆದರೆ ಅದಕ್ಕೊಂದು ಮಿತಿ ಇರಬೇಕು. ಪ್ರಕೃತಿಯ ಮೂಲ ಸ್ವರೂಪವನ್ನೇ ತೊಳೆದು ಹಾಕುವಂತಹ ಅಭಿವೃದ್ಧಿಯಾದಾಗ ಪ್ರಕೃತಿ ಖಂಡಿತವಾಗಿಯೂ ಒಂದಲ್ಲ ಒಂದು ದಿನ ತನ್ನ ಆಕ್ರೋಶವನ್ನು ಹೊರ ಹಾಕಿಯೇ ಹಾಕುತ್ತಾಳೆ.

ಇದಕ್ಕೆ ನೈಜ ಉದಾಹರಣೆ ಈಗ ಕಣ್ಣ ಮುಂದಿರುವ ಮದ್ದಿಲ್ಲದ ಕೊರೋನ. ಇನ್ನೊಂದು ತಾಜಾ ಉದಾಹರಣೆ ಹಿಂದೆಂದೂ ನಾವು ಕಂಡಿರದ ಕಳೆದ ವರ್ಷದ ನೇತ್ರಾವತಿಯ ನದಿಯ ಪ್ರವಾಹ (9/08/2019) .ಕಾರಣ ಹುಡುಕಿದರೆ ನದಿಯ ಈ ಪರಿ ಕ್ರೋಧಕ್ಕೆ ಅಂದು ನಾವೇ ಕಾರಣರು ಎಂದೆನಿಸುವುದು. ರಾಜಕಾರಣ ಏನೇ ಇರಲಿ ಆದರೆ ಪ್ರಕೃತಿಗೆ ಅದು ವಿಷಯವೇ ಅಲ್ಲ. ಅಂದು ಇದೇ ನೇತ್ರಾವತಿ ನದಿ ತಿರುವು ಯೋಜನೆ ಎಂದೇ ಕರೆಸಿಕೊಳ್ಳುವ ಎತ್ತಿನ ಹೊಳೆ ಯೋಜನೆಯನ್ನು ಸರ್ಕಾರ ಮಾಡುವಾಗ ದಕ್ಷಿಣ ಕನ್ನಡ ಜನರ "ಮೌನದ ಫಲವೇ" ಇಂದು ಅನುಭವಿಸುತ್ತಿದ್ದೇವೆ.
 ಸರ್ಕಾರ ಯಾವುದೇ ಇರಲಿ ಅದು ತಪ್ಪು ಮಾಡಿದಾಗ ಖಂಡಿಸುವ ಬುದ್ದಿ ನಮ್ಮಲಿರಬೇಕು. ಅದು ಬಿಟ್ಟು ಅದರ ಪಾಡಿಗೆ ಏನೋ ಮಾಡುತ್ತಿದೆ ನಮಗೇನು ಕಷ್ಟ ಬಂದಾಗ ನೋಡಿಕೊಳ್ಳೋಣ ಎಂದರೆ ಇದೇ ಆಗುವುದು. ಅಂದು ನೇತ್ರಾವತಿಯ ಒಡಲನ್ನು ,ಸುತ್ತಲಿನ ಬೆಟ್ಟ ಗುಡ್ಡಗಳನ್ನು ಅಗೆದು-ಬಗೆದು ಪ್ರಕೃತಿಮಾತೆಯ ಮೂಲಸ್ವರೂಪವನ್ನು ಛಿದ್ರಗೊಳಿಸಿದ ಪರಿಣಾಮ ಮಂಗಳೂರಿಗೆ ಮಂಗಳೂರೇ ಮುಳುಗಿ ಮುಗಿದು ಹೋಗುವುದರಲ್ಲಿತ್ತು ಆದರೆ ದೇವರ ದಯೆಯಿತ್ತು🙏 ಪ್ರಕೃತಿಗೆ ಮನುಜನ ಮೇಲೆ ಇನ್ನೂ ಕರುಣೆ ಉಳಿದಿತ್ತು 👍ಆದ ಕಾರಣ ಜೀವಗಳನು ಉಳಿಸಿತ್ತು.
ನಾನು ಯಾರ ಪರವೂ ಅಲ್ಲ ವಿರೋಧಿಯೂ ಅಲ್ಲ.
ಆದರೆ 24*7 ರಾಜಕೀಯವನ್ನು ಮಾಡುತ್ತಿರುವುದು, ಕೇಳಿದ್ದನ್ನು ಕೊಡದೆ; ಆಲೋಚಿಸದೆ ಮಾಡುವ ಕೆಲಸಗಳನ್ನು ನೋಡುತ್ತಿರುವ ನಾನು ಈ ಮಾತನ್ನು ಹೇಳಲೇಬೇಕು ಎಂದೆನಿಸಿ ಅಕ್ಷರಗಳಿಗಿಳಿಸಿರುವೆ.
ಇದುವರೆಗೂ ಇಲ್ಲಿ ಅಭಿವೃದ್ಧಿ ಬಿಡಿ ಸಂಪರ್ಕ ನೀಡುವ ಕೆಲಸ ಬಾಯಲ್ಲಿ ಮಾಡಿದ್ದೇ ಹೆಚ್ಚು. ಆದ ಕಾರಣ ಅಭಿವೃದ್ಧಿ ಹೆಚ್ಚಾದರೆ ಪ್ರಕೃತಿ-ಮನುಷ್ಯ ಇಬ್ಬರಿಗೂ ಹಾಳು. ಆದ್ದರಿಂದ ಹಾಸಿಗೆ ಇದ್ದಷ್ಟು ಕಾಲು ಚಾಚು👍ಕಡಿಮೆ ಖರ್ಚಿನಲ್ಲಿ ಗರಿಷ್ಠ ಅಭಿವೃದ್ಧಿ ಮಾಡು ಈ ಸೂತ್ರ ನಮ್ಮ ಊರ ಮತ್ತು ಊರ ಜನರ ಅಭಿವೃದ್ಧಿಗೆ ಸಾಕು.

ಪ್ರಕೃತಿಯನ್ನು ಅದರ ಪಾಡಿಗೆ ಬಿಟ್ಟು ಬಿಡಿ ಅವಳು ನಮ್ಮನ್ನು ಸದಾ ಕಾಯುವಳು. ಅಭಿವೃದ್ಧಿ ಮಾಡಿ ಅದು ತಪ್ಪಲ್ಲ. ಆದರೆ ಅವಳ ಸ್ವರೂಪವನ್ನು ಕುರೂಪಗೊಳಿಸದಿರಿ. ಹಾಗೆಯೇ ಊರಿಗೆ ಸಂಪರ್ಕ ಕಲ್ಪಿಸುವ ಯೋಜನೆಗಳನ್ನು ಮಾಡಿ ಆದರೆ ಊರು ಮುಂದೆ ಮುಳುಗದಿರಲಿ, ಕೃಷಿಗೆ ,ಊರಿನ ಜನ ಜೀವನಕ್ಕೆ ,ಊರನು ಕಾಯುವ ಶಕ್ತಿಗಳಿಗೆ ಅಡ್ಡಿಯಾಗಡಿರಲಿ ಅಷ್ಟೇ ನನ್ನ ಮಾತು.

ಇದು ನಮಗೆ ಪ್ರಕೃತಿ ನೀಡಿದ ಮತ್ತೊಂದು ಅವಕಾಶ 'ಹೇ ಮನುಜ ತಪ್ಪನ್ನು ತಿದ್ದಿಕೋ 'ಎಂದರೆ ತಪ್ಪಲ್ಲ.
ಪರಿವರ್ತನೆ ಜಗದ ನಿಯಮವೆಂಬ ವಾಕ್ಯವನ್ನು ನಾವರಿತುಕೊಳ್ಳೋಣ. ಬದಲಾಗೋಣ ಪ್ರಕೃತಿಯನ್ನು ಬದುಕಲು ಬಿಡೋಣ.... ಜೀವಗಳಿಗೆ ಜೀವನವನ್ನು ಕೊಡುವ ಆ ಜೀವಕ್ಕೂ ಜೀವವಿದೆ ಎಂಬುದನು ತಿಳಿಯೋಣ.


✍️ ನೇತ್ರಾವತಿ ತೀರದಿಂದ.

ಮತ್ತೆ ಮರಳಿ ಬರುವೆನೆಂಬ ಹೊಸ ಭರವಸೆಯಲಿ: ತೂಗುಸೇತುವೆ 😍❤️



Friday, 15 May 2020

ತಲೆಗೆ ಬಂದ ತರಲೆ ಪ್ರಶ್ನೆ 😜😇

                     ಹಾಗೆ ಸುಮ್ಮನೆ ಆಲೋಚಿಸಿದಾಗ




ಈ ವಿದೇಶಿ ವಸ್ತುಗಳ ಮರುಳು ಹಿಡಿದಂಥವರಿಗೆ ನನ್ನ ಪ್ರಶ್ನೆ 👉ವಿದೇಶಿ ವಸ್ತುಗಳ ಬಳಸುವಾಗ ಇಲ್ಲದ ಸಂದೇಹಗಳು ಅದೇಕೋ ಸ್ವದೇಶಿ ವಸ್ತುಗಳನ್ನು ಬಳಸುವಾಗ ದಿಢೀರ್ ಎಂದು ಆಲೋಚನೆಗೆ ಬರುವುದುಂಟು ಏತಕೋ ನಾ ಕಾಣೆ🤷‍♀️ ಹಾಗೂ ಈ ಸ್ವದೇಶಿ ವಸ್ತುಗಳಲ್ಲಿ ಕಲಬೆರಕೆ ಮುಂತಾದವುಗಳಿವೆ ಎಂಬುವರಿಗೆ ನನ್ನದೊಂದು ಮಾತು ವಿದೇಶಿ ವಸ್ತುಗಳಲ್ಲಿ ಬಳಕೆಯಾದ ಕಲಬೆರಕೆ ಪದಾರ್ಥ, ವಸ್ತುಗಳಿಂದ ವಿಷವುಣ್ಣುವುದಕ್ಕಿಂತ ಸ್ವದೇಶಿ ವಸ್ತುಗಳಲ್ಲಿನ ವಿಷವುಣ್ಣುವುದು ಮೇಲಲ್ಲವೇ. ಕಾರಣ ಅದು ವಿದೇಶಿ ವಿಷ ಥೇಟ್ ಕೊರೋನ ದ ಥರ ಮದ್ದಿಲ್ಲದಿದ್ದರೆ ಕಷ್ಟ ಅಲ್ವೇ😜😶

#ಸ್ವಾವಲಂಬಿ _ಭಾರತ 🚩

ಸ್ವಾವಲಂಬಿ ಭಾರತ 🚩

ಭಾರತ ಸಂಪದ್ಭರಿತ ದೇಶವಾಗಿತ್ತು ಎಂದು ಇತಿಹಾಸದಲ್ಲಿ ಓದಿದ್ದೇವೆ ಮತ್ತು ಹೆಮ್ಮೆಯಿಂದ ಹೇಳುತ್ತೇವೆ. ಭಾರತ ಎಲ್ಲದರಲ್ಲೂ ನಂ. 1 ಆಗಿ ನೋಡಬಯಸುತ್ತೇವೆ ಮತ್ತು ವಿಶ್ವಗುರು ಆಗಿದ್ದ ದೇಶ ಕೂಡ.
ಈ ಮಹಾಮಾರಿ ಕೊರೋನಾದಿಂದ ಸಂಪೂರ್ಣ ವಿಶ್ವವೇ ನಲುಗಿ ಹೋಗಿದೆ. ಎಲ್ಲ ಕ್ಷೇತ್ರಗಳಲ್ಲೂ ಅದರಲ್ಲೂ ಮುಖ್ಯವಾಗಿ ಆರ್ಥಿಕವಾಗಿ ಬಲಾಢ್ಯವಾಗಿ ಬೆಳೆದು ನಿಂತಿರುವ ದೇಶಗಳೇ ಇಂದು ಮುಗ್ಗರಿಸಿದಂತಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಅಭಿವೃದ್ಧಿಯತ್ತ ಧಾಪುಗಾಲು ಇಡುತ್ತಿದ್ದ ನಮ್ಮ ದೇಶಕ್ಕೂ ಸಹಜವಾಗಿಯೇ ಹೊಡೆತ ಬಿದ್ದಿರುತ್ತದೆ.
ಆದ ಕಾರಣ ಈ ಸಂಧರ್ಭದಲ್ಲಿ ದೇಶದ ಆರ್ಥಿಕ ಬಲವನ್ನು ಹೆಚ್ಚಿಸುವುದು ಬಹುಮುಖ್ಯವಾಗಿದೆ ಮತ್ತು ಈ ದೇಶದ ಪ್ರಜೆಗಳಾದ ನಮಗೆ ಸಮಯ ಬಂದಾಗ ದೇಶದ ಸೇವೆಗಾಗಿ ಸಿದ್ದನಾಗಿರುವುದು ನೈತಿಕವಾಗಿ ಮತ್ತು ಸಾಂವಿಧಾನಿಕವಾಗಿಯೂ ನಮ್ಮ ಕರ್ತವ್ಯವೇ ಆಗಿದೆ.
ಇಂತಹ ಸಮಯದಲ್ಲಿ ಯಾವ ರೀತಿ ಸರ್ಕಾರ ಹೇಳಿದಂತೆ ನಮ್ಮ ಆರೋಗ್ಯದ ಹಿತ-ದೃಷ್ಟಿಯಿಂದ ಆರೋಗ್ಯ ಕ್ರಮ ಮತ್ತು ನಿಯಮಗಳನ್ನು ಪಾಲಿಸುವುದು ಎಷ್ಟು ಮುಖ್ಯವೋ
 ಅದೇರೀತಿ ದೇಶದ ಭದ್ರ-ಭವಿಷ್ಯದ ಹಿತದೃಷ್ಟಿಯಿಂದ ರಾಷ್ಟ್ರದ ಆರ್ಥಿಕ ಬಲವನ್ನು ಹೆಚ್ಚಿಸುವುದರಲ್ಲಿ ನಮ್ಮ ಸಹಕಾರವೂ ನಮ್ಮ ಆದ್ಯ ಕರ್ತವ್ಯವೇ ಆಗಿದೆ.
ಹಾಗಾಗಿ ಗಡಿಯಲ್ಲಿ ನಿಂತು ಶಸ್ತ್ರ ಹಿಡಿದು ಹೋರಾಡಿಯೆಂದು ಹೇಳುತ್ತಿಲ್ಲ. ಇನ್ನಾದರೂ ವಿದೇಶಿ ಕಂಪನಿ ವಸ್ತುಗಳನ್ನು ಬಳಸುವ ಮರುಳನ್ನು ಬಿಟ್ಟು ದೇಶದ ಆರ್ಥಿಕತೆಗೆ ಆನೆಬಲವನ್ನು ನೀಡಲು ಸ್ವದೇಶಿ ವಸ್ತುಗಳನ್ನೇ ಬಳಸಿ ಎಂಬುದೇ ನನ್ನ ಕೋರಿಕೆ. ನಮ್ಮ ನಿತ್ಯ ಜೀವನದಿ ಬಳಸುವ ಪ್ರತೀ ಸಣ್ಣ ವಿದೇಶಿ ವಸ್ತುವಿನ ಸ್ಥಾನದಲ್ಲಿ  ದೇಶೀಯ ಕಂಪೆನಿಯ ವಸ್ತುಗಳನ್ನೇ ಬಳಸಿ. ಆಗ ನಾವು ದೇಶ ಸೇವೆ ಮಾಡಿದಂತೆಯೇ.

#ಸ್ವಾವಲಂಬಿ ಭಾರತ 🚩




Saturday, 15 February 2020

ಒಂದಿಷ್ಟು ಪುರಾವೆಯನ್ನೂ ಉಳಿಸದೆ ಇತಿಹಾಸದ ಪುಟ ಸೇರಿದ ಮುಗೇರಡ್ಕ ತೂಗು ಸೇತುವೆಯ ಕಥೆ!

ಮತ್ತೆ ಮರಳಿ ಬರುವೆನೆಂಬ  ಭರವಸೆಯಲಿ...




ಅದು 2013, ನಮ್ಮೂರ ಸರ್ಕಾರಿ ಶಾಲೆಯಲ್ಲಿ ಆಗ ನಾನಿನ್ನೂ ಹತ್ತನೇ ತರಗತಿಯಲ್ಲಿದ್ದೆ. ಹತ್ತನೆಯ ನಂತರ ಮುಂದೇನು ಎಂಬ ಪ್ರಶ್ನೆ ಸಾಮಾನ್ಯ. ಅದರಂತೆಯೇ ನನಗೂ ಅದೇ ಚಿಂತೆ ಮುಂದೇನು?
ಹೀಗೆ ಈ ಪ್ರಶ್ನೆಯೊಡನೆ ದಿನಗಳು ಉರುಳುತ್ತಾ...
'ವಿದ್ಯಾಭ್ಯಾಸವು ಸಾಗಿತ್ತು... ಕನಸಿನ ಮೂಟೆ ಬೆನ್ನ ಮೇಲಿತ್ತು'. ಆದರೇನು ಮಾಡುವುದು?! ವಿದ್ಯಾಭ್ಯಾಸ ಮುಂದುವರೆಸುವುದು ಹೇಗೆ ಎಂಬುದೇ ಪ್ರಶ್ನೆಯಾಗಿ ಉಳಿದಿತ್ತು. ಕಾರಣ  ನಮ್ಮೂರಿಗೆ ದಿನನಿತ್ಯ ಸಂಚಾರಕ್ಕೆ ಇದ್ದ ಅನಾನುಕೂಲತೆ. ನನ್ನ ಕಾಲೇಜು/ಮುಂದಿನ  ವಿದ್ಯಾಭ್ಯಾಸದ ಕನಸು ಎಲ್ಲಿ ಕನಸಾಗಿಯೇ ಉಳಿಯುವುದೇನೋ ಎಂದೆನಿಸಿತು.

ಆದರೆ ದೇವರ ದಯೆ ಎಂಬಂತೆ ; ಈ ಮೊದಲು ಸರಿಯಾದ ಸಂಪರ್ಕ ವ್ಯವಸ್ಥೆಯನ್ನು ಕಂಡಿರದ ಸುಂದರ ಹಾಗೂ ಕಾರಣಿಕ ಊರಾಗಿರುವ ಮುಗೇರಡ್ಕ ದಲ್ಲಿ... "ಜೀವನದಿಯ ತಟದಲ್ಲಿ ಜೀವನ ನೌಕೆಯನು" ನಡೆಸುತ್ತಾ ; ಬದುಕು ಕಟ್ಟಿಕೊಂಡಿದ್ದ ಜನರು 2013ರಲ್ಲಿ ತೂಗುಸೇತುವೆಯೊಂದಿಗೆ ಹೊಸದೊಂದು ಭರವಸೆಯೊಂದಿಗೆ ಬದುಕು ಆರಂಭಗೊಂಡಿತಲ್ಲದೇ, ಇದರ ಮೂಲಕವಾಗಿ ಅಭಿವೃದ್ಧಿಯತ್ತ ಮೊದಲ ಹೆಜ್ಜೆಯನು ಇಡುತ್ತಾರೆ.

ಆಗ ಮನಸಿಗಾದ ಖುಷಿ ಅಷ್ಟಿಷ್ಟಲ್ಲ. ಕಾರಣ ನನ್ನ ಕನಸಿನ ಮೊದಲ ಮೆಟ್ಟಿಲೇ ಅಥವಾ ಬುನಾದಿ ಎಂದರೆ ತಪ್ಪಲ್ಲ. ಕೇವಲ ನಾನೊಬ್ಬಳೇ ಅಲ್ಲ(ಸು ಸಂಪರ್ಕ ವ್ಯವಸ್ಥೆಯ ಕೊರತೆಯಿಂದಾಗಿ ವಿದ್ಯಾಭ್ಯಾಸ ಮೊಟಕುಗೊಳಿಸಿದವರು ಹೆಚ್ಚು ) ವಿದ್ಯಾರ್ಥಿಗಳು, ಉದ್ಯೋಗಿಗಳು, ಕೂಲಿ ಕಾರ್ಮಿಕರು ಮಾತ್ರವಲ್ಲದೇ ಬಾಲರಿಂದ ಹಿಡಿದು ವೃದ್ಧರವರೆಗೂ, ಊರಿನ ಎಲ್ಲರೂ ಖುಷಿಪಟ್ಟರು.

ಕಷ್ಟಗಳು ದೂರವಾದಾಗ ಖುಷಿ ಸಹಜ ತಾನೆ. ತೂಗುಸೇತುವೆ ಎಂಬುದು  ಭೌತಿಕವಾಗಿ ಕಣ್ಣಿಗೆ ಕಾಣುವ ಸಂಚಾರ ಮಾಧ್ಯಮ ಅಥವಾ ಗ್ರಾಮ - ಗ್ರಾಮಗಳ ಜೋಡಿಸುವ  ಕೊಂಡಿ ಮಾತ್ರವಲ್ಲ. ಅದು ಜನರ ಜೀವನಾಡಿ, ಊರಿನ ಜನರ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಭಾಂದವ್ಯಗಳ ಬೆಸೆಯುವ ಕೊಂಡಿಯೂ ಹೌದು.

ಊರ ಜನರಿಗದು ಜೀವನಾಧಾರದ ವ್ಯವಸ್ಥೆಯಾದರೆ, ಪೆನ್ನು ಹಿಡಿದು ಕುಳಿತವಗೆ ಬರಹಗಳಿಗೆ ಸ್ಫೂರ್ತಿ, ವಿದ್ಯಾರ್ಥಿಗಳಿಗದು ತಮ್ಮ ಕನಸಿನ ಆಗಸವನೇರಲಿರೋ ಮೆಟ್ಟಿಲು , ಹವ್ಯಾಸಿ ಛಾಯಾ-ಗ್ರಾಹಕನಿಗೆ ಪ್ರಕೃತಿ ಸೌಂದರ್ಯವ ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿಯಲು ಸಹಕರಿಸುವ ಸಹಾಯಕ,  ದೂರದ ಪ್ರವಾಸಿಗರ ಊರಿಗೆ ಕೈ ಬೀಸಿ ಕರೆದು ಅವರ  ಪ್ರಯಾಸವನಿಳಿಸೋ ಮಿತ್ರ ಹೀಗೆ ತೂಗುಸೇತುವೆಯೆಂಬುದು ನಮ್ಮೆಲ್ಲರ ಜೀವನದ ಒಂದು ಬಹುಭಾಗ ತುಂಬಿಹೋಗಿದ್ದ ಒಬ್ಬ ಒಡನಾಡಿ. 👈ಈ ಒಡನಾಡಿಯ  ಸಂಪರ್ಕವಾದದ್ದು - ನಮ್ಮ ರಾಜ್ಯದಲ್ಲಿ  ಮುಖ್ಯಮಂತ್ರಿ ಯಡಿಯೂರಪ್ಪನವರ ಸರ್ಕಾರವಿದ್ದಾಗ. ಶ್ರೀಯುತ ಗಿರೀಶ್ ಭಾರದ್ವಾಜರ ನೇತೃತ್ವದಲ್ಲಿ ನಿರ್ಮಾಣಗೊಂಡು ಪರಿಚಯವಾದ. ಆದರೆ ಇಂದು
ನಮ್ಮೆಲ್ಲರ ಜೀವನಾಡಿಯಾಗಿದ್ದ ಆ ಒಡನಾಡಿ ಪ್ರಕೃತಿಯ ಕೋಪಕ್ಕೆ ತುತ್ತಾಗಿ (ಆಗಸ್ಟ್  9, 2019 ರ ಭಾರೀ ಮಳೆಗೆ) ಒಂದಿಷ್ಟೂ ಪುರಾವೆ ಯನ್ನು ಉಳಿಸದೆ ನಾಶ ಹೊಂದಿದ ಮುಗೇರಡ್ಕ ತೂಗುಸೇತುವೆ ಅವಳದೇ ಮಡಿಲಿನಲ್ಲಿ ಬಿದ್ದಿದ್ದಾನೆ.

ಊರಿನಲ್ಲಿ ಡೈರಿಗೆ ಹಾಲು ಹಾಕುವ ಕೃಷಿಕರು, ಅವಸರದಲ್ಲಿ ತಡವಾಯಿತೆಂದು ಕಿಲೋಮೀಟರ್ ಗಟ್ಟಲೆ ನಡೆದು ಬಂದು; ಓಡಿ ಹೋಗಿ ಬಸ್ಸನ್ನೇರುವ ಶಾಲಾ- ಕಾಲೇಜು ವಿದ್ಯಾರ್ಥಿಗಳು, ಪುಟ್ಟ ಬ್ಯಾಗನು ಹೆಗಲಿಗೇರಿಸಿ ಪೋಷಕರ ಕೈಹಿಡಿದು ಶಾಲಾ ವಾಹನವ ಕಾಯುವ ಭವಿಷ್ಯ- ಬಿಂದುಗಳು, ಊರಿನೊಳಗಿನ ಸರ್ಕಾರಿ ಶಾಲೆಗೆ ಪಾಠಮಾಡಲು ಬರುವ ಅಧ್ಯಾಪಕರು, ದಿನಗೂಲಿ ಕಾರ್ಮಿಕರು/ಕೆಲಸಗಾರರು, ಮಹಿಳೆಯರು, ಮಕ್ಕಳು ಹೀಗೆ ಅಂದು ದಿನ ಬೆಳಗಾದರೆ ತೂಗುಸೇತುವೆಯೊಂದಿಗೆ ಆರಂಭವಾಗುತ್ತಿದ್ದ...ತೂಗು ಉಯ್ಯಾಲೆಯಂತಿಹ ಈ ಬದುಕು ; ಇಂದು ಬಿದ್ದಿರುವ ತೂಗುಸೇತುವೆಯ ಮುಂದೆ ಭಾರವಾಗಿ ಸಾಗಲೇ ಬೇಕಾದ  ಪರಿಸ್ಥಿತಿ ಉಂಟಾಗಿದೆ.

ಆದರೆ ನಾವೆಲ್ಲರೂ ಪುನಃ ನಿರೀಕ್ಷೆಯಲ್ಲಿ ಇದ್ದೇವೆ. ರಾಜ್ಯದಲ್ಲಿ ಮತ್ತದೇ ಯಡಿಯೂರಪ್ಪನವರ ಸರ್ಕಾರವಿದೆ. ಗಿರೀಶ್ ಭಾರದ್ವಾಜ್ ರ ನೇತೃತ್ವದಲ್ಲಿ ಪುನಃ ತೂಗುಸೇತುವೆಯು ನಿರ್ಮಾಣಗೊಂಡು ನಮ್ಮ ಒಡನಾಡಿ "ಮತ್ತೆ ಮರಳಿ ಬರುವನೆಂಬ ಹೊಸ ಭರವಸೆಯಲಿ".

✍️ನೇತ್ರಾವತಿ ತೀರದಿಂದ.


ಮೇಲಿನ ಲೇಖನ ಓದಿದ ಮೇಲೆ ನಿಮ್ಮ ಊರಿನ ಸಂಚಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದಲ್ಲವೇ?!! ಎಂದು ನೀವೆಲ್ಲ ಕೇಳಬಹುದು. ಖಂಡಿತಾ ಕಂಡುಕೊಳ್ಳಬಹುದು ಆದರೆ ಶಾಶ್ವತವಾದ ಸಂಪರ್ಕ ವ್ಯವಸ್ಥೆ ಆಗಲು ತೆಗೆದುಕೊಳ್ಳುವ ಸಮಯ ಕನಿಷ್ಠ  ಎಂದರೆ ನಾಲ್ಕೈದು ವರುಷಗಳು ಬೇಕೇ ಬೇಕು. ಆಗ ಅಲ್ಲಿಯವರೆಗೂ ಸಾಮಾನ್ಯ (ಜೂನ್ - ಅಕ್ಟೋಬರ್ ತಿಂಗಳವರೆಗೆ) ಅಂದರೆ ಮಳೆಗಾಲದಲ್ಲಿ ಸಂಚಾರದ ವ್ಯವಸ್ಥೆ ನಮ್ಮ ಊರಿನದ್ದು ದೊಡ್ಡ ಪ್ರಶ್ನಾರ್ಥಕವೇ ಆಗಿರುತ್ತದೆ. ಕಾರಣ ಮೊದಲಿನ ಹಾಗೆ ದೋಣಿ ಇಲ್ಲ. ಅಕಸ್ಮಾತ್ ದೋಣಿ ವ್ಯವಸ್ಥೆ ಅಥವಾ ಬೋಟ್ ವ್ಯವಸ್ಥೆ ಮಾಡಿದರೂ ಅದು ದೊಡ್ಡ ಮಳೆಗಾಲದಲ್ಲಿ ಸಂಚಾರ ಅಸುರಕ್ಷಿತ. ಇದಕ್ಕೆ ಕಾರಣ ಅದಾಗಲೇ ವ್ಯವಸ್ಥೆ ಮಾಡಿರುವ ಬೋಟ್ ನ ಬಳಿ ತೆರಳಬೇಕಾದರೂ ನದಿಯ ಸ್ವಲ್ಪ ಭಾಗ ದಾಟುವುದು ಅನಿವಾರ್ಯವೇ ಆಗಿದೆ. ಮಳೆ ಬಂದ ಸಂಧರ್ಭದಲ್ಲಿ ನದಿ ನೀರಿನ ಪ್ರಮಾಣ ಮತ್ತು ಸೆಳೆತ ಅಧಿಕವಾಗಿರುತ್ತದೆ. ಆದ ಕಾರಣ ದಾಟುವುದು ಅಪಾಯ.( ಪ್ರಸ್ತುತ ಸಮಸ್ಯೆಯನ್ನು ಅನುಭವಿಸಿದವಳಾಗಿ ಇದನ್ನಿಂದು ಬರಹ ರೂಪಕ್ಕಿಳಿಸಿರುವೆ).

ನಮ್ಮ ಊರಿನಲ್ಲಿ ಆಗ ಬೇಕಾದ ಅಭಿವೃದ್ಧಿ ಕಾರ್ಯಗಳು ಬೇಕಾದಷ್ಟಿವೆ. ಏಕೆಂದರೆ ಸ್ವಾತಂತ್ರ್ಯ ಕಳೆದು ಅದೆಷ್ಟು ವರುಷ ಕಳೆದರೂ ಒಂದು ಜಲ್ಲಿಕಲ್ಲು ಬೀಳದ ರಸ್ತೆಗಳಿವೆ. ಹೇಳಲು ಹೋದರೆ ಪಟ್ಟಿ ದೊಡ್ಡದೇ ಇದೆ. ಆದರೆ ಅದು ಇಲ್ಲಿ ಅವಶ್ಯವಿಲ್ಲ.   ಅಭಿವೃದ್ಧಿ ಬೇಕು ಆದರೆ ಅದು ಮಿತಿ ಮೀರಬಾರದೆಂಬುದು ಆಶಯ. ಈಗ ಬಂದೊದಗಿರುವ ಪರಿಸ್ಥಿತಿಗೆ ಕಾರಣಗಳನ್ನು ಹುಡುಕುತ್ತಾ ಹೋಗಿ ಅವಲೋಕಿಸಿದರೆ ಅಂದು ಪ್ರಕೃತಿಯ ಆ ರೀತಿಯ ಕೋಪಕ್ಕೆ ಮನುಷ್ಯರಾದ ನಾವೇ ಕಾರಣರು ಎಂಬುದು ತಿಳಿಯುತ್ತದೆ. ಅದೇನೇ ಇದ್ದರೂ ಪರಿಸ್ಥಿತಿಗೆ ಅನುಗುಣವಾಗಿ
ನಮಗೆ ಮೊದಲನೆಯದಾಗಿ ಆಗಬೇಕಿರುವುದು ಸುರಕ್ಷಿತ ಸಂಚಾರ ವ್ಯವಸ್ಥೆ(2020 ರ ಮಳೆಗಾಲದ ಮೊದಲು) .

"ಗ್ರಾಮಗಳನ್ನು ಸಂಧಿಸುವ/ಜೋಡಿಸುವ ತೂಗುಸೇತುವೆಯಲಿ ಜನರ ಬದುಕಿನ ಬಂಡಿ ನಿಂತಿದೆ. ಆದ್ದರಿಂದ ಕೇವಲ ನಾವು ಮಾತ್ರವಲ್ಲ ನಮ್ಮ ಒಡನಾಡಿಯಾದ ತೂಗುಸೇತುವೆಯೂ ಕೂಡ... ಮತ್ತೆ  ಸಹಜ (ಮೊದಲ) ಸ್ಥಿತಿಗೆ ಮರಳುವೆವು ಎಂಬ ನಿರೀಕ್ಷೆಯಲ್ಲಿ....ಅದನ್ನು ನೆರವೇರಿಸುವ ಜವಾಬ್ದಾರಿ ಸರ್ಕಾರದ ಕೈಯಲ್ಲಿ."

ಇದು  ಕಳೆದ ಮಳೆಗಾಲದಲ್ಲಿ (09 ಆಗಸ್ಟ್ 2019 ರಂದು) ಒಂದಿಷ್ಟು ಪುರಾವೆಯನ್ನೂ ಉಳಿಸದೆ ಇತಿಹಾಸದ ಪುಟ ಸೇರಿದ ಮುಗೇರಡ್ಕ ತೂಗು ಸೇತುವೆಯ ಕಥೆ.
         
     

           'ಮತ್ತೆ ಮರಳಿ ಬರುವೆನೆಂಬ ಭರವಸೆಯಲಿ'

                               - ಇಂತೀ ನಿಮ್ಮವನು
                               - ತೂಗುಸೇತುವೆ😊