Thursday 22 February 2018

ಪುಸ್ತಕವು ಸ್ನೇಹಿತನಾಗಬಲ್ಲದೇ .... !!!???

                      'ಪುಸ್ತಕ'ವೆಂಬ ಮೂರಕ್ಷರದ ಸ್ನೇಹಿತ .... 

ನಮಗೆ ಪುಸ್ತಕ ಎಂದಾಕ್ಷಣ  ಮೊದಲು ನೆನಪಾಗೋದು ಬಿಳಿ ಹಾಳೆಮೇಲೆ ಬರೆದಿರುವ ಅಥವಾ ಅಚ್ಚೊತ್ತಿರುವ ದುಂಡಾಕಾರದ ಗುಂಡು -ಗುಂಡು ,ಪುಟ್ಟ ಪುಟ್ಟ ಅಕ್ಷರಗಳು. ಇದೇನಿದೂ ???... ಇವ್ಳು ಪುಸ್ತಕ, ಅಕ್ಷರ , ಸ್ನೇಹಿತ ಅಂತೆಲ್ಲ ಮಾತಾಡ್ತಿದಾಳೆ ಅಂದ್ಕೊಂಡ್ರಾ ....! ಹ್ಮ್ ಹೌದು ; ಇಂದು ನಾ ಹೀಗೆ ಕೂತಿರಬೇಕಾದ್ರೆ; ನಮ್ಮ ಫ್ರೆಂಡ್ಸ್ ಎಲ್ಲಾ ನೆನಪಾದ್ರೂ ... ಹಾಗೆ ಯೋಚಿಸ್ತಾ ಜೀವನದಲ್ಲಿ ಸದಾ ಕಾಲ ಸ್ನೇಹಿತನಾಗಬಲ್ಲವರು ಯಾರು? /ಸ್ನೇಹಿತನಂತೆ /ನಷ್ಟೇ ಪಾತ್ರ ವಹಿಸುವ ವಿಷಯ ಯಾವುದೆಂದು ಆಲೋಚಿಸಬೇಕಾದರೆ ; ತಕ್ಷಣ ದೃಷ್ಟಿಯು ಚಲಿಸಿದ್ದು ; ಅಲ್ಲೇ ಮೇಜಿನಲ್ಲಿ  ಹಾಯಾಗಿ ಇದ್ದ ಪುಸ್ತಕದ ಮೇಲೆ.  ಕೂಡಲೇ ನರಮಂಡಲಗಳ ಸೂಚನೆಗಳ ಮೇರೆಗೆ ಕೈಗೆ ಬಂದ ಲೇಖನಿಯು  ಪುಸ್ತಕ ವಿಷ್ಯದ ಬಗ್ಗೆ ಗೀಚಲು ಹೊರಟಿತು.     
                           
 ಜ್ಜ್ಞಾನವೆಂಬ ಹಸಿವು ವಿದ್ಯಾರ್ಥಿಗಳಿಂದ ಹಿಡಿದು ಪ್ರತಿಯೊಬ್ಬ ಮನುಷ್ಯನಲ್ಲಿ ಇರಬೇಕಾದ ಒಂದು ಅಂಶ.                            ನಮ್ಮ  ಜ್ಞಾನದ ದಾಹವನ್ನು ನೀಗಿಸೋದೇ ಪುಸ್ತಕ ಎಂದರೆ ತಪ್ಪಾಗಲಾರದು . ಪುಸ್ತಕವೆಂಬುದು ಕೇವಲ ಪುಸ್ತಕವಲ್ಲ. ಅದು ಬದುಕೆಂಬ ಮೂರಕ್ಷರದ ಹಾದಿಯನ್ನೇ ಬದಲಾಯಿಸಬಲ್ಲ ಸಾಮರ್ಥ್ಯವಿದೆ.ಹಾಗಂದುಕೊಂಡು ಹೇಳುತ್ತಾ ಹೋಗುವುದಾದರೆ ಬಾಳಿನಲ್ಲಿ ಮೂರಂಕಿಗಳದ್ದೇ ಕಾರುಬಾರು.ಜನನ, ಎಳೆಯ , ಶಿಕ್ಷಣ , ಯೌವನ ,ಜೀವನ ... ಕೊನೆಗೆ ಮರಣ . ಇದೇ ರೀತಿ ಮುಂದುವರೆಸುತ್ತಾ ಹೋದರೆ ಪಟ್ಟಿ ಬಾಲದಂತೆ ಬೆಳೆಯುತ್ತಾ ಸಾಗುವುದು ಖಚಿತ. ಅದರ ಬಗ್ಗೆ ಇನ್ನೊಮ್ಮೆ ಬರೆದರಾಯಿತು ಬಿಡಿ... 
ತಾನು ಒಬ್ಬಂಟಿಯೆಂದು ಕುಳಿತವರಿಂದ ಹಿಡಿದು ತನ್ನ ವೃದ್ದಾಪ್ಯದ ಸಮಯ ಕಳೆಯುವ ಸಂಗಾತಿಯಾಗಿ , ಜೊತೆ ಇದ್ದು ; ಒಬ್ಬ ವಿದ್ಯಾರ್ಥಿಯ ಉತ್ತಮ ಸ್ನೇಹಿತ /ತೆ ಯಾಗಿರುವುದು. ನಮ್ಮ  ಬಾಳಿನಲ್ಲಿ ಬಂದು ನಾವು ಅತ್ತಾಗ , ಮನವು ಬೇಸರಿಸಿದಾಗ ಮನಸಿಗೆ ಸಮಾಧಾನವನು ಹೇಳಿ ; ಪುನಃ  ಬದುಕನ್ನು ಹಸನುಗೊಳಿಸುವ ಕೆಲಸವನ್ನು  ಆಪ್ತನಾಗಿ ಬಂದು ಕೂಡಿ ಮಾಡಿ ಮುಗಿಸುವುದು. 

ನಮಗರಿವಿರದ ಅನಾಮಿಕ ವಿಷಯ/ವಿಚಾರಗಳ  ತಿಳುವಳಿಕೆ ಹಾಗೂ ಎಷ್ಟೋ ಘಟನೆಗಳ  ಅಸ್ತಿತ್ವಕ್ಕೆ                      ಕುತೂಹಲವೆಂಬ ಮರದ ಬೀಜವ ಬಿತ್ತಿ ಅದೇ ಗುಂಗಿನಲ್ಲಿರುವಂತೆಯೂ ಮಾಡುವುದು . ಮನುಜನ ಹೃದಯಾಂತರಾಳದಲ್ಲಿ ದೇಶ ಭಕ್ತಿಯೆಂಬ  ದೀಪವನು ಹಚ್ಚಿ , ನಮ್ಮೀ  ಭಾಷಾ -ಸಾಹಿತ್ಯಗಳ ಬಗೆಗಿನ ಆಸಕ್ತಿಯೆಂಬ ತೈಲವು  ಒಸರುವಂತೆ ಮಾಡಿ;ಬದುಕಿನ ಜೊತೆ ಬೆರೆಸುವುದು. 
ಒಬ್ಬ ಮನುಷ್ಯನ ಜೀವಕ್ಕೆ ಅರ್ಥವನ್ನು ಕಟ್ಟಿಕೊಟ್ಟು ; ಜೀವಾತ್ಮದ ಪರಮೋನ್ನತಿಗೆ ಕಾರಣವಾಗುವ ಹೊತ್ತಗೆ ಎಂದು ಕರೆಯಲ್ಪಡುವ ಪುಸ್ತಕವು ಖಂಡಿತವಾಗಿಯೂ ಒಬ್ಬ ಉತ್ತಮ ಸ್ನೇಹಿತನಾಗುವುದು  ಅಲ್ಲವೇ...!!!!??? 



                                                                          ವಿಧಾತ್ರೀ .ಪಿ. ಎಸ್ .                            


Wednesday 21 February 2018

'ಮತದಾನ' ಇದೊಂದು ಬ್ರಹ್ಮಾಸ್ತ್ರ !!!

          ದೇಶದ ಚಿತ್ರಣವನ್ನೇ ಬದಲಾಯಿಸಬಲ್ಲ

                      ತಾಕತ್ತು  'ಮತ'ಕ್ಕಿದೆ .

ಪ್ರಜಾಪ್ರಭುತ್ವದ ' ಬ್ರಹ್ಮಾ ಸ್ತ್ರ'ವೆಂದೇ  ಪರಿಗಣಿಸಬಹುದಾದಂತಹ ಅಂಶವೆಂದರೆ ಅದು ಮತ/ಮತದಾನ . 
ಇಲ್ಲಿ ಬ್ರಹ್ಮಾಸ್ತ್ರ ಎಂದು ಸೂಚಿಸಲು ಕಾರಣಗಳು ಇವೆ. ನಮ್ಮದು ಪ್ರಜಾಪ್ರಭುತ್ವ , ಜಾತ್ಯಾತೀತ ರಾಷ್ಟ್ರ. ಈಗ ಆಡಳಿತದ  ಬಗ್ಗೆ ನೋಡುವುದಾದರೆ; ನಮ್ಮ ದೇಶ ಪುರಾತನ ಸಂಸ್ಕೃತಿಯನ್ನೊಳಗೊಂಡು , ಹೆಸರಾಂತ ಮನೆತನಗಳಲ್ಲಿ ಹುಟ್ಟಿ;
ಬಾಳಿ-ಬದುಕಿ  ಆಡಳಿತವನ್ನು ನಡೆಸಿದ ದಿಟ್ಟ ರಾಜರುಗಳು ಆಳಲ್ಪಟ್ಟ ದೇಶ  ನಮ್ಮದು . 

                            ಸ್ವಾತಂತ್ರ್ಯ ಪೂರ್ವ ಹಾಗೂ  ಸ್ವಾತಂತ್ರ್ಯೋತ್ತರ ಭಾರತಕ್ಕೆ ಅಜಗಜಾಂತರ ವೆತ್ಯಾಸಗಳಿದ್ದರೂ ಕೂಡ ಇಂದಿಗೂ ದೇಶದಲ್ಲಿ ಕೆಲವೊಂದು ಸಮಸ್ಯೆಗಳು ಜಟಿಲವಾಲಾಗುತ್ತಿರಲು ಕಾರಣ ಈ ಅಧಿಕಾರದ ಆಸೆಯೇ ಅಲ್ಲವೇ???  .....   ಅದೇನೇ ಇರಲಿ , ಈಗ ಮತದಾನದ ವಿಷಯಕ್ಕೆ ಬರುವುದಾದರೆ; ಸಾಂವಿಧಾನಿಕವಾಗಿ ಮತದಾನ ಎಂದರೆ ನಮ್ಮ ಪ್ರತಿನಿಧಿಗಳ ಆಯ್ಕೆ ಪ್ರಕ್ರಿಯೆ. ಆದರೆ  ಇಂದಿದು ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎಂಬುದನ್ನು ನಾನು ಹೇಳ ಬೇಕಾಗಿಲ್ಲ . 

                           ಚುನಾವಣೆಗೆ ದಿನಗಣನೆ ಶುರುವಾಗಿದೆ. ಈಗಾಗಲೇ ರಾಜಕೀಯ ಕಚ್ಚಾಟಗಳೂ ಆರಂಭವಾಗಿದೆ.     ಪಕ್ಷ-ಪ್ರತಿಪಕ್ಷಗಳು ಮಾಧ್ಯಮಗಳಲ್ಲಿ ಹೇಳಿಕೆಗಳ ಮೇಲೆ ಹೇಳಿಕೆಗಳು ಬಾಣ -ತಿರುಗುಬಾಣಗಳಂತೆ ದಿನಂಪ್ರತಿ ನೋಡುತ್ತಿದ್ದೇವೆ. ಇಂತಹ ಸಂಧರ್ಭದಲ್ಲಿ ಚುನಾವಣೆ  ಕುರಿತು ನಾಲ್ಕು ಸಾಲುಗಳನ್ನ ಗೀಚಿದರೇನೆಂದು ಕುಳಿತೆ. 
                          
                          ಆಗ ನನಗೆ ತೋಚಿದ್ದೇ ಮತ/ಮತದಾನ. ಎರಡೇ ಅಕ್ಷರವಾದ್ರು, ಎಷ್ಟೊಂದು ಪವರ್ ಫುಲ್ ಆಲ್ವಾ!!!       ಹದಿನೆಂಟು ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಚಲಾಯಿಸಲು ಅವಕಾಶಸಿಗುವಂತಹ ಒಂದು ಹಕ್ಕು. ದೇಶದ ಹೊಲಸು ರಾಜಕಾರಣದ ಅರಿವಿರುವ ನಾವು; ಯಾವುದೇ ತಪ್ಪು ನಿರ್ಧಾರ ಕೈಗೊಳ್ಳದೇ ನಮ್ಮ ಅಮೂಲ್ಯ ಮತ ಪೋಲಾಗದೇ ಇರುವಂತಹ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ. 

                         ಯುವಜನತೆ ಎಚ್ಚೆತ್ತುಕೊಂಡಾಗ ಮಾತ್ರ ದೇಶದಲ್ಲಿ ಉತ್ತಮ ವಾತಾವರಣ ಮೂಡಲು ಸಾಧ್ಯ. ಅಕ್ಷರಸ್ಥ ಜನರೇ ತಪ್ಪು ಮಾಡಿದಾಗ ನಿರೀಕ್ಷಿತ ಬದಲಾವಣೆಗಳು ಅಸಾಧ್ಯ . ಈ ರೀತಿಯಾದಂತಹ ಮನೋಭಾವನೆ ಜನರಲ್ಲಿ ಮೂಡಿದರೆ ಉತ್ತಮ ದಿನಗಳ ಕನಸು ನನಸಾಗುವುದು. 
                          
                                                                    -ವಿಧಾತ್ರೀ.ಪಿ.ಎಸ್

                           

ಸಜ್ಜನರ ಸಂಗದ ಫಲ

                                   ಸಜ್ಜನರ ಸಂಗದ ಫಲ 

ಧರ್ಮಪುರಿ ಎಂಬ ಊರಿನಲ್ಲಿ ಒಬ್ಬ ಪಟೇಲನಿದ್ದ . ಆತನಿಗೆ ಸೋಮು ಎಂಬ ಕೆಟ್ಟಪ್ರವೃತ್ತಿಯ ಮಗನಿದ್ದ . ಕೆಟ್ಟ ನಡತೆಯುಳ್ಳವನಾಗಿದ್ದ ಪಟೇಲನು ಯಾರಿಗೂ ಸಂದೇಹ ಬರದಂತಹ ರೀತಿಯಲ್ಲಿ  ಕಳ್ಳರ ಗುಂಪೊಂದನ್ನು ಊರಿನೊಳಗಿರಿಸಿಕೊಂಡಿದ್ದ. 
ಆ ಕಳ್ಳರ ಗುಂಪಿಗೆ ನಾಯಕನನ್ನು ನೇಮಿಸಿದ್ದ. ಆ ಪಟೇಲನಿಗೆ ಬೇಕಾದಷ್ಟೂ ಆಸ್ತಿ-ಪಾಸ್ತಿ ಇದ್ದರೂ ಕೂಡ ಮತ್ತಷ್ಟು ಹಣ ಗಳಿಸೋ ಆಸೆಯಿತ್ತು . ಆದ್ದರಿಂದ ಸೋಮುವೂ ಕಳ್ಳರಗುಂಪಿನೊಂದಿಗೆ ಸೇರಿ, ಕಳ್ಳತನ ಮಾಡುವುದನ್ನು ಕಲಿತ ಮತ್ತು ತಿದ್ದಿ ಬುದ್ದಿಹೇಳಬೇಕಾದ ತಂದೆ ಆತನನ್ನು ಮತ್ತಷ್ಟು ಮಗನ ಕುಕೃತ್ಯಕ್ಕೆ ಪ್ರೋತ್ಸಾಹಿಸಿದ . 
                   
             ಅದೇ ಊರಿನಲ್ಲಿ ಭದ್ರ ಎಂಬುವವನ ಪುಟ್ಟ ಸಂಸಾರವೂ  ವಾಸಿಸುತಿತ್ತು. ಆತ ತನ್ನ ಮಡದಿ ಮಕ್ಕಳೊಂದಿಗೆ ಸುಖವಾದ ಜೀವನವನ್ನೇ ಸಾಗಿಸುತ್ತಿದ್ದ. ಹಿರಿಯವ ರಾಜು ಹಾಗೂ ಕಿರಿಯವ ರಾಮು. ಇಬ್ಬರು ಮಕ್ಕಳೂ ಅವಳಿಗಳಾದ ಕಾರಣ ಊರಿನಲ್ಲಿ ಜನರಿಗೆ ಅವರಿಬ್ಬರಲ್ಲಿ ಅಣ್ಣ ಮತ್ತು ತಮ್ಮನ ಗುರುತು ಹಿಡಿಯುವುದು ಸ್ವಲ್ಪ ಅಸಾಧ್ಯವೇ ಆಗಿತ್ತು . 
ಇಬ್ಬರೂ ತಮ್ಮ ಊರಿನ ಪಕ್ಕದಲ್ಲಿರೋ ಶಾಲೆಗೇ ತೆರಳುತ್ತಿದ್ದರು. ಈರ್ವರು ಮಕ್ಕಳು ಬುದ್ದಿವಂತರಾಗಿದ್ದರಲ್ಲದೆ,ಇಬ್ಬರು ಮಕ್ಕಳ ಬಗ್ಗೆ ಹೆಡ್ ಮಾಸ್ತರರು ಮೆಚ್ಚುಗೆಯನ್ನೂ ವ್ಯಕ್ತಪಡಿಸುತ್ತಿದ್ದರು. 
               ಸೋಮುವೂ ಸಹ ಅದೇ ಶಾಲೆಗೇ ಬರುತ್ತಿದ್ದ. ಆದರೆ ರಾಮು ಆತನ ಸ್ನೇಹ ಬೆಳೆಸಿಕೊಂಡ . ಎಷ್ಟೇ ಬುದ್ದಿ ಹೇಳಿದರೂ ಕೂಡ ಲೆಕ್ಕಿಸದೆ ಅವನಜೊತೆ ಸೇರಿ ಗುಟ್ಟಾಗಿ ತೆರಳಿ ಕಳ್ಳತನ ಮಾಡಲು ಪ್ರಾರಂಭಿಸಿದ.  ಹೀಗೆ ಸ್ವಲ್ಪ ಸಮಯದ ಬಳಿಕ  ಇಬ್ಬರೂ ಶಾಲೆಯನ್ನು ಬಿಟ್ಟು ಕಳ್ಳರಗುಂಪನ್ನು ಸೇರಿಕೊಂಡರು. ಕಳ್ಳತನ , ದರೋಡೆಗಳ ಮೂಲಕ ಕುಖ್ಯಾತರೆನಿಸಿಕೊಂಡರು. ಇತ್ತ ರಾಜು ಒಳ್ಳೆಯ ವಿಚಾರಗಳನ್ನು ಬೆಳೆಯುತ್ತಾ; ತನ್ನ ವಿದ್ಯಾಭ್ಯಾಸವನ್ನ ಮುಂದುವರೆಸಿದ ಹಾಗು ಒಬ್ಬ ಒಳ್ಳೆಯ ಮನುಷ್ಯನಾಗಿ ಸಮಾಜದ ವ್ಯಕ್ತಿಯಾದ . 

          ಈಕಡೆ ರಾಮು ಕಳ್ಳತನ ನಡೆಸುವಾಗ ಕದ್ದಮಾಲಿಗೆ ನಡೆದ ಜಗಳದಲ್ಲಿ ಸತ್ತು ಹೋದ. ಆದರೆ ರಾಜುವಿಗೆ ಉತ್ತಮ ಉದ್ಯೋಗ ದೊರಕಿ,ಅದನ್ನ ನಡೆಸುತ್ತಾ ಸಾಮಾಜಿಕ ವ್ಯಕ್ತಿಯಾಗಿ ಬೆಳೆದ  ; ಉತ್ತಮ ಜೇವನವನ್ನು  ಸಾಗಿಸಿದನು. 

                                                                                -ವಿಧಾತ್ರೀ.ಪಿ.ಎಸ್

ನಮ್ಮ ಕಾಲೇಜು

                              ಶ್ರೀ ರಾಮಕುಂಜೇಶ್ವರ ಕಾಲೇಜು 


ಬೆಳಗುತಿದೆ  ಬೆಳಗುತಿದೆ  ವಿದ್ಯಾ ಮಂದಿರ 
ರಾಮಕುಂಜ ನಾಮಾಂಕಿತ ವಿದ್ಯಾ ಮಂದಿರ //
  
ಹತ್ತೂರಿಗೆ ಚಿರಪರಿಚಿತ ಈ ಮಂದಿರ . 
ಶಿಸ್ತು, ನಡೆ , ಸಂಯಮಕೆ ಹೆಸರಾಗಿರೋ ವಿದ್ಯಾ ಮಂದಿರ //

ಪೇಜಾವರರ ಕನಸಿನ ಕೂಸು ಈ ಮಂದಿರ . 
ಅಂಬೆಗಾಲಿಕ್ಕುತ ಅಭಿವೃದ್ಧಿಯತ್ತ ಸಾಗುತಿದೆ ಈ ಮಂದಿರ //

ಶ್ರೀ ರಾಮಕುಂಜೇಶ್ವರನು ಇಲ್ಲಿ ಅಧಿದೇವತೆ 
ಜೊತೆಗೆ ನೆಲೆಸಿಹಳಿಲ್ಲಿ  ತಾಯಿ ಜ್ಞಾನ  ದೇವತೆ // 

ಗ್ರಾಮೀಣ ಪ್ರತಿಭೆಗಳಿಗೆ ಇಲ್ಲಿ ನೀಡೋ ಬೆಲೆ 
  ಅವರಿಗದು  ಕಲ್ಪಿಸುವುದು ಸಮಾಜದಲಿ ನೆಲೆ //

 ಎಲ್ಲರನು  ಪರಿಗಣಿಸುವರು ಇಲ್ಲಿ 
  ಈ ಗುಣಕೆ ಸರಿ ಸಾಟಿ ಎಲ್ಲಿ //

ವಿದ್ಯಾರ್ಥಿಗಳಿಗಿದೆ ಇಲ್ಲಿ  ಅವಕಾಶ 
ವಿದ್ಯಾರ್ಜನೆಗೆ ಇದುವೇ ಸದಾವಕಾಶ 
ಬಳಸಿಕೊಳ್ಳಿ ಈ ಸುವರ್ಣಾವಕಾಶ //
                         -ವಿಧಾತ್ರೀ .ಪಿ.ಎಸ್