Thursday, 22 February 2018

ಪುಸ್ತಕವು ಸ್ನೇಹಿತನಾಗಬಲ್ಲದೇ .... !!!???

                      'ಪುಸ್ತಕ'ವೆಂಬ ಮೂರಕ್ಷರದ ಸ್ನೇಹಿತ .... 

ನಮಗೆ ಪುಸ್ತಕ ಎಂದಾಕ್ಷಣ  ಮೊದಲು ನೆನಪಾಗೋದು ಬಿಳಿ ಹಾಳೆಮೇಲೆ ಬರೆದಿರುವ ಅಥವಾ ಅಚ್ಚೊತ್ತಿರುವ ದುಂಡಾಕಾರದ ಗುಂಡು -ಗುಂಡು ,ಪುಟ್ಟ ಪುಟ್ಟ ಅಕ್ಷರಗಳು. ಇದೇನಿದೂ ???... ಇವ್ಳು ಪುಸ್ತಕ, ಅಕ್ಷರ , ಸ್ನೇಹಿತ ಅಂತೆಲ್ಲ ಮಾತಾಡ್ತಿದಾಳೆ ಅಂದ್ಕೊಂಡ್ರಾ ....! ಹ್ಮ್ ಹೌದು ; ಇಂದು ನಾ ಹೀಗೆ ಕೂತಿರಬೇಕಾದ್ರೆ; ನಮ್ಮ ಫ್ರೆಂಡ್ಸ್ ಎಲ್ಲಾ ನೆನಪಾದ್ರೂ ... ಹಾಗೆ ಯೋಚಿಸ್ತಾ ಜೀವನದಲ್ಲಿ ಸದಾ ಕಾಲ ಸ್ನೇಹಿತನಾಗಬಲ್ಲವರು ಯಾರು? /ಸ್ನೇಹಿತನಂತೆ /ನಷ್ಟೇ ಪಾತ್ರ ವಹಿಸುವ ವಿಷಯ ಯಾವುದೆಂದು ಆಲೋಚಿಸಬೇಕಾದರೆ ; ತಕ್ಷಣ ದೃಷ್ಟಿಯು ಚಲಿಸಿದ್ದು ; ಅಲ್ಲೇ ಮೇಜಿನಲ್ಲಿ  ಹಾಯಾಗಿ ಇದ್ದ ಪುಸ್ತಕದ ಮೇಲೆ.  ಕೂಡಲೇ ನರಮಂಡಲಗಳ ಸೂಚನೆಗಳ ಮೇರೆಗೆ ಕೈಗೆ ಬಂದ ಲೇಖನಿಯು  ಪುಸ್ತಕ ವಿಷ್ಯದ ಬಗ್ಗೆ ಗೀಚಲು ಹೊರಟಿತು.     
                           
 ಜ್ಜ್ಞಾನವೆಂಬ ಹಸಿವು ವಿದ್ಯಾರ್ಥಿಗಳಿಂದ ಹಿಡಿದು ಪ್ರತಿಯೊಬ್ಬ ಮನುಷ್ಯನಲ್ಲಿ ಇರಬೇಕಾದ ಒಂದು ಅಂಶ.                            ನಮ್ಮ  ಜ್ಞಾನದ ದಾಹವನ್ನು ನೀಗಿಸೋದೇ ಪುಸ್ತಕ ಎಂದರೆ ತಪ್ಪಾಗಲಾರದು . ಪುಸ್ತಕವೆಂಬುದು ಕೇವಲ ಪುಸ್ತಕವಲ್ಲ. ಅದು ಬದುಕೆಂಬ ಮೂರಕ್ಷರದ ಹಾದಿಯನ್ನೇ ಬದಲಾಯಿಸಬಲ್ಲ ಸಾಮರ್ಥ್ಯವಿದೆ.ಹಾಗಂದುಕೊಂಡು ಹೇಳುತ್ತಾ ಹೋಗುವುದಾದರೆ ಬಾಳಿನಲ್ಲಿ ಮೂರಂಕಿಗಳದ್ದೇ ಕಾರುಬಾರು.ಜನನ, ಎಳೆಯ , ಶಿಕ್ಷಣ , ಯೌವನ ,ಜೀವನ ... ಕೊನೆಗೆ ಮರಣ . ಇದೇ ರೀತಿ ಮುಂದುವರೆಸುತ್ತಾ ಹೋದರೆ ಪಟ್ಟಿ ಬಾಲದಂತೆ ಬೆಳೆಯುತ್ತಾ ಸಾಗುವುದು ಖಚಿತ. ಅದರ ಬಗ್ಗೆ ಇನ್ನೊಮ್ಮೆ ಬರೆದರಾಯಿತು ಬಿಡಿ... 
ತಾನು ಒಬ್ಬಂಟಿಯೆಂದು ಕುಳಿತವರಿಂದ ಹಿಡಿದು ತನ್ನ ವೃದ್ದಾಪ್ಯದ ಸಮಯ ಕಳೆಯುವ ಸಂಗಾತಿಯಾಗಿ , ಜೊತೆ ಇದ್ದು ; ಒಬ್ಬ ವಿದ್ಯಾರ್ಥಿಯ ಉತ್ತಮ ಸ್ನೇಹಿತ /ತೆ ಯಾಗಿರುವುದು. ನಮ್ಮ  ಬಾಳಿನಲ್ಲಿ ಬಂದು ನಾವು ಅತ್ತಾಗ , ಮನವು ಬೇಸರಿಸಿದಾಗ ಮನಸಿಗೆ ಸಮಾಧಾನವನು ಹೇಳಿ ; ಪುನಃ  ಬದುಕನ್ನು ಹಸನುಗೊಳಿಸುವ ಕೆಲಸವನ್ನು  ಆಪ್ತನಾಗಿ ಬಂದು ಕೂಡಿ ಮಾಡಿ ಮುಗಿಸುವುದು. 

ನಮಗರಿವಿರದ ಅನಾಮಿಕ ವಿಷಯ/ವಿಚಾರಗಳ  ತಿಳುವಳಿಕೆ ಹಾಗೂ ಎಷ್ಟೋ ಘಟನೆಗಳ  ಅಸ್ತಿತ್ವಕ್ಕೆ                      ಕುತೂಹಲವೆಂಬ ಮರದ ಬೀಜವ ಬಿತ್ತಿ ಅದೇ ಗುಂಗಿನಲ್ಲಿರುವಂತೆಯೂ ಮಾಡುವುದು . ಮನುಜನ ಹೃದಯಾಂತರಾಳದಲ್ಲಿ ದೇಶ ಭಕ್ತಿಯೆಂಬ  ದೀಪವನು ಹಚ್ಚಿ , ನಮ್ಮೀ  ಭಾಷಾ -ಸಾಹಿತ್ಯಗಳ ಬಗೆಗಿನ ಆಸಕ್ತಿಯೆಂಬ ತೈಲವು  ಒಸರುವಂತೆ ಮಾಡಿ;ಬದುಕಿನ ಜೊತೆ ಬೆರೆಸುವುದು. 
ಒಬ್ಬ ಮನುಷ್ಯನ ಜೀವಕ್ಕೆ ಅರ್ಥವನ್ನು ಕಟ್ಟಿಕೊಟ್ಟು ; ಜೀವಾತ್ಮದ ಪರಮೋನ್ನತಿಗೆ ಕಾರಣವಾಗುವ ಹೊತ್ತಗೆ ಎಂದು ಕರೆಯಲ್ಪಡುವ ಪುಸ್ತಕವು ಖಂಡಿತವಾಗಿಯೂ ಒಬ್ಬ ಉತ್ತಮ ಸ್ನೇಹಿತನಾಗುವುದು  ಅಲ್ಲವೇ...!!!!??? 



                                                                          ವಿಧಾತ್ರೀ .ಪಿ. ಎಸ್ .                            


Wednesday, 21 February 2018

'ಮತದಾನ' ಇದೊಂದು ಬ್ರಹ್ಮಾಸ್ತ್ರ !!!

          ದೇಶದ ಚಿತ್ರಣವನ್ನೇ ಬದಲಾಯಿಸಬಲ್ಲ

                      ತಾಕತ್ತು  'ಮತ'ಕ್ಕಿದೆ .

ಪ್ರಜಾಪ್ರಭುತ್ವದ ' ಬ್ರಹ್ಮಾ ಸ್ತ್ರ'ವೆಂದೇ  ಪರಿಗಣಿಸಬಹುದಾದಂತಹ ಅಂಶವೆಂದರೆ ಅದು ಮತ/ಮತದಾನ . 
ಇಲ್ಲಿ ಬ್ರಹ್ಮಾಸ್ತ್ರ ಎಂದು ಸೂಚಿಸಲು ಕಾರಣಗಳು ಇವೆ. ನಮ್ಮದು ಪ್ರಜಾಪ್ರಭುತ್ವ , ಜಾತ್ಯಾತೀತ ರಾಷ್ಟ್ರ. ಈಗ ಆಡಳಿತದ  ಬಗ್ಗೆ ನೋಡುವುದಾದರೆ; ನಮ್ಮ ದೇಶ ಪುರಾತನ ಸಂಸ್ಕೃತಿಯನ್ನೊಳಗೊಂಡು , ಹೆಸರಾಂತ ಮನೆತನಗಳಲ್ಲಿ ಹುಟ್ಟಿ;
ಬಾಳಿ-ಬದುಕಿ  ಆಡಳಿತವನ್ನು ನಡೆಸಿದ ದಿಟ್ಟ ರಾಜರುಗಳು ಆಳಲ್ಪಟ್ಟ ದೇಶ  ನಮ್ಮದು . 

                            ಸ್ವಾತಂತ್ರ್ಯ ಪೂರ್ವ ಹಾಗೂ  ಸ್ವಾತಂತ್ರ್ಯೋತ್ತರ ಭಾರತಕ್ಕೆ ಅಜಗಜಾಂತರ ವೆತ್ಯಾಸಗಳಿದ್ದರೂ ಕೂಡ ಇಂದಿಗೂ ದೇಶದಲ್ಲಿ ಕೆಲವೊಂದು ಸಮಸ್ಯೆಗಳು ಜಟಿಲವಾಲಾಗುತ್ತಿರಲು ಕಾರಣ ಈ ಅಧಿಕಾರದ ಆಸೆಯೇ ಅಲ್ಲವೇ???  .....   ಅದೇನೇ ಇರಲಿ , ಈಗ ಮತದಾನದ ವಿಷಯಕ್ಕೆ ಬರುವುದಾದರೆ; ಸಾಂವಿಧಾನಿಕವಾಗಿ ಮತದಾನ ಎಂದರೆ ನಮ್ಮ ಪ್ರತಿನಿಧಿಗಳ ಆಯ್ಕೆ ಪ್ರಕ್ರಿಯೆ. ಆದರೆ  ಇಂದಿದು ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎಂಬುದನ್ನು ನಾನು ಹೇಳ ಬೇಕಾಗಿಲ್ಲ . 

                           ಚುನಾವಣೆಗೆ ದಿನಗಣನೆ ಶುರುವಾಗಿದೆ. ಈಗಾಗಲೇ ರಾಜಕೀಯ ಕಚ್ಚಾಟಗಳೂ ಆರಂಭವಾಗಿದೆ.     ಪಕ್ಷ-ಪ್ರತಿಪಕ್ಷಗಳು ಮಾಧ್ಯಮಗಳಲ್ಲಿ ಹೇಳಿಕೆಗಳ ಮೇಲೆ ಹೇಳಿಕೆಗಳು ಬಾಣ -ತಿರುಗುಬಾಣಗಳಂತೆ ದಿನಂಪ್ರತಿ ನೋಡುತ್ತಿದ್ದೇವೆ. ಇಂತಹ ಸಂಧರ್ಭದಲ್ಲಿ ಚುನಾವಣೆ  ಕುರಿತು ನಾಲ್ಕು ಸಾಲುಗಳನ್ನ ಗೀಚಿದರೇನೆಂದು ಕುಳಿತೆ. 
                          
                          ಆಗ ನನಗೆ ತೋಚಿದ್ದೇ ಮತ/ಮತದಾನ. ಎರಡೇ ಅಕ್ಷರವಾದ್ರು, ಎಷ್ಟೊಂದು ಪವರ್ ಫುಲ್ ಆಲ್ವಾ!!!       ಹದಿನೆಂಟು ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಚಲಾಯಿಸಲು ಅವಕಾಶಸಿಗುವಂತಹ ಒಂದು ಹಕ್ಕು. ದೇಶದ ಹೊಲಸು ರಾಜಕಾರಣದ ಅರಿವಿರುವ ನಾವು; ಯಾವುದೇ ತಪ್ಪು ನಿರ್ಧಾರ ಕೈಗೊಳ್ಳದೇ ನಮ್ಮ ಅಮೂಲ್ಯ ಮತ ಪೋಲಾಗದೇ ಇರುವಂತಹ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ. 

                         ಯುವಜನತೆ ಎಚ್ಚೆತ್ತುಕೊಂಡಾಗ ಮಾತ್ರ ದೇಶದಲ್ಲಿ ಉತ್ತಮ ವಾತಾವರಣ ಮೂಡಲು ಸಾಧ್ಯ. ಅಕ್ಷರಸ್ಥ ಜನರೇ ತಪ್ಪು ಮಾಡಿದಾಗ ನಿರೀಕ್ಷಿತ ಬದಲಾವಣೆಗಳು ಅಸಾಧ್ಯ . ಈ ರೀತಿಯಾದಂತಹ ಮನೋಭಾವನೆ ಜನರಲ್ಲಿ ಮೂಡಿದರೆ ಉತ್ತಮ ದಿನಗಳ ಕನಸು ನನಸಾಗುವುದು. 
                          
                                                                    -ವಿಧಾತ್ರೀ.ಪಿ.ಎಸ್

                           

ಸಜ್ಜನರ ಸಂಗದ ಫಲ

                                   ಸಜ್ಜನರ ಸಂಗದ ಫಲ 

ಧರ್ಮಪುರಿ ಎಂಬ ಊರಿನಲ್ಲಿ ಒಬ್ಬ ಪಟೇಲನಿದ್ದ . ಆತನಿಗೆ ಸೋಮು ಎಂಬ ಕೆಟ್ಟಪ್ರವೃತ್ತಿಯ ಮಗನಿದ್ದ . ಕೆಟ್ಟ ನಡತೆಯುಳ್ಳವನಾಗಿದ್ದ ಪಟೇಲನು ಯಾರಿಗೂ ಸಂದೇಹ ಬರದಂತಹ ರೀತಿಯಲ್ಲಿ  ಕಳ್ಳರ ಗುಂಪೊಂದನ್ನು ಊರಿನೊಳಗಿರಿಸಿಕೊಂಡಿದ್ದ. 
ಆ ಕಳ್ಳರ ಗುಂಪಿಗೆ ನಾಯಕನನ್ನು ನೇಮಿಸಿದ್ದ. ಆ ಪಟೇಲನಿಗೆ ಬೇಕಾದಷ್ಟೂ ಆಸ್ತಿ-ಪಾಸ್ತಿ ಇದ್ದರೂ ಕೂಡ ಮತ್ತಷ್ಟು ಹಣ ಗಳಿಸೋ ಆಸೆಯಿತ್ತು . ಆದ್ದರಿಂದ ಸೋಮುವೂ ಕಳ್ಳರಗುಂಪಿನೊಂದಿಗೆ ಸೇರಿ, ಕಳ್ಳತನ ಮಾಡುವುದನ್ನು ಕಲಿತ ಮತ್ತು ತಿದ್ದಿ ಬುದ್ದಿಹೇಳಬೇಕಾದ ತಂದೆ ಆತನನ್ನು ಮತ್ತಷ್ಟು ಮಗನ ಕುಕೃತ್ಯಕ್ಕೆ ಪ್ರೋತ್ಸಾಹಿಸಿದ . 
                   
             ಅದೇ ಊರಿನಲ್ಲಿ ಭದ್ರ ಎಂಬುವವನ ಪುಟ್ಟ ಸಂಸಾರವೂ  ವಾಸಿಸುತಿತ್ತು. ಆತ ತನ್ನ ಮಡದಿ ಮಕ್ಕಳೊಂದಿಗೆ ಸುಖವಾದ ಜೀವನವನ್ನೇ ಸಾಗಿಸುತ್ತಿದ್ದ. ಹಿರಿಯವ ರಾಜು ಹಾಗೂ ಕಿರಿಯವ ರಾಮು. ಇಬ್ಬರು ಮಕ್ಕಳೂ ಅವಳಿಗಳಾದ ಕಾರಣ ಊರಿನಲ್ಲಿ ಜನರಿಗೆ ಅವರಿಬ್ಬರಲ್ಲಿ ಅಣ್ಣ ಮತ್ತು ತಮ್ಮನ ಗುರುತು ಹಿಡಿಯುವುದು ಸ್ವಲ್ಪ ಅಸಾಧ್ಯವೇ ಆಗಿತ್ತು . 
ಇಬ್ಬರೂ ತಮ್ಮ ಊರಿನ ಪಕ್ಕದಲ್ಲಿರೋ ಶಾಲೆಗೇ ತೆರಳುತ್ತಿದ್ದರು. ಈರ್ವರು ಮಕ್ಕಳು ಬುದ್ದಿವಂತರಾಗಿದ್ದರಲ್ಲದೆ,ಇಬ್ಬರು ಮಕ್ಕಳ ಬಗ್ಗೆ ಹೆಡ್ ಮಾಸ್ತರರು ಮೆಚ್ಚುಗೆಯನ್ನೂ ವ್ಯಕ್ತಪಡಿಸುತ್ತಿದ್ದರು. 
               ಸೋಮುವೂ ಸಹ ಅದೇ ಶಾಲೆಗೇ ಬರುತ್ತಿದ್ದ. ಆದರೆ ರಾಮು ಆತನ ಸ್ನೇಹ ಬೆಳೆಸಿಕೊಂಡ . ಎಷ್ಟೇ ಬುದ್ದಿ ಹೇಳಿದರೂ ಕೂಡ ಲೆಕ್ಕಿಸದೆ ಅವನಜೊತೆ ಸೇರಿ ಗುಟ್ಟಾಗಿ ತೆರಳಿ ಕಳ್ಳತನ ಮಾಡಲು ಪ್ರಾರಂಭಿಸಿದ.  ಹೀಗೆ ಸ್ವಲ್ಪ ಸಮಯದ ಬಳಿಕ  ಇಬ್ಬರೂ ಶಾಲೆಯನ್ನು ಬಿಟ್ಟು ಕಳ್ಳರಗುಂಪನ್ನು ಸೇರಿಕೊಂಡರು. ಕಳ್ಳತನ , ದರೋಡೆಗಳ ಮೂಲಕ ಕುಖ್ಯಾತರೆನಿಸಿಕೊಂಡರು. ಇತ್ತ ರಾಜು ಒಳ್ಳೆಯ ವಿಚಾರಗಳನ್ನು ಬೆಳೆಯುತ್ತಾ; ತನ್ನ ವಿದ್ಯಾಭ್ಯಾಸವನ್ನ ಮುಂದುವರೆಸಿದ ಹಾಗು ಒಬ್ಬ ಒಳ್ಳೆಯ ಮನುಷ್ಯನಾಗಿ ಸಮಾಜದ ವ್ಯಕ್ತಿಯಾದ . 

          ಈಕಡೆ ರಾಮು ಕಳ್ಳತನ ನಡೆಸುವಾಗ ಕದ್ದಮಾಲಿಗೆ ನಡೆದ ಜಗಳದಲ್ಲಿ ಸತ್ತು ಹೋದ. ಆದರೆ ರಾಜುವಿಗೆ ಉತ್ತಮ ಉದ್ಯೋಗ ದೊರಕಿ,ಅದನ್ನ ನಡೆಸುತ್ತಾ ಸಾಮಾಜಿಕ ವ್ಯಕ್ತಿಯಾಗಿ ಬೆಳೆದ  ; ಉತ್ತಮ ಜೇವನವನ್ನು  ಸಾಗಿಸಿದನು. 

                                                                                -ವಿಧಾತ್ರೀ.ಪಿ.ಎಸ್

ನಮ್ಮ ಕಾಲೇಜು

                              ಶ್ರೀ ರಾಮಕುಂಜೇಶ್ವರ ಕಾಲೇಜು 


ಬೆಳಗುತಿದೆ  ಬೆಳಗುತಿದೆ  ವಿದ್ಯಾ ಮಂದಿರ 
ರಾಮಕುಂಜ ನಾಮಾಂಕಿತ ವಿದ್ಯಾ ಮಂದಿರ //
  
ಹತ್ತೂರಿಗೆ ಚಿರಪರಿಚಿತ ಈ ಮಂದಿರ . 
ಶಿಸ್ತು, ನಡೆ , ಸಂಯಮಕೆ ಹೆಸರಾಗಿರೋ ವಿದ್ಯಾ ಮಂದಿರ //

ಪೇಜಾವರರ ಕನಸಿನ ಕೂಸು ಈ ಮಂದಿರ . 
ಅಂಬೆಗಾಲಿಕ್ಕುತ ಅಭಿವೃದ್ಧಿಯತ್ತ ಸಾಗುತಿದೆ ಈ ಮಂದಿರ //

ಶ್ರೀ ರಾಮಕುಂಜೇಶ್ವರನು ಇಲ್ಲಿ ಅಧಿದೇವತೆ 
ಜೊತೆಗೆ ನೆಲೆಸಿಹಳಿಲ್ಲಿ  ತಾಯಿ ಜ್ಞಾನ  ದೇವತೆ // 

ಗ್ರಾಮೀಣ ಪ್ರತಿಭೆಗಳಿಗೆ ಇಲ್ಲಿ ನೀಡೋ ಬೆಲೆ 
  ಅವರಿಗದು  ಕಲ್ಪಿಸುವುದು ಸಮಾಜದಲಿ ನೆಲೆ //

 ಎಲ್ಲರನು  ಪರಿಗಣಿಸುವರು ಇಲ್ಲಿ 
  ಈ ಗುಣಕೆ ಸರಿ ಸಾಟಿ ಎಲ್ಲಿ //

ವಿದ್ಯಾರ್ಥಿಗಳಿಗಿದೆ ಇಲ್ಲಿ  ಅವಕಾಶ 
ವಿದ್ಯಾರ್ಜನೆಗೆ ಇದುವೇ ಸದಾವಕಾಶ 
ಬಳಸಿಕೊಳ್ಳಿ ಈ ಸುವರ್ಣಾವಕಾಶ //
                         -ವಿಧಾತ್ರೀ .ಪಿ.ಎಸ್ 
 

Thursday, 23 November 2017

ಮರಳಿ 'ನಾ 'ಬಂದಿರುವೆ ಮನೆಗೆ ....

                             


ಮರಳಿ 'ನಾ 'ಬಂದಿರುವೆ ಮನೆಗೆ .... 


ನಮಸ್ತೆ  ಪ್ರೆಂಡ್ಸ್ .... ಹೇಗಿದೀರ ಎಲ್ಲರೂ ??? ಓಹ್  ಯಾಕೆ ನಾ ಹೀಗೆ ಕೇಳ್ತಿದಿನಿ ಅಂತ ಅಂದ್ಕೊಂಡ್ರಾ ...?ನಾನು ತುಂಬಾ ಸಮಯದ ಬಳಿಕ ಈ ಬ್ಲಾಗ್  ಮನೆಗೆ ಬಂದಿದೇನೇ . ೩-೪ ತಿಂಗಳುಗಳೇ ಕಳೆದವು . ನಾನೀ ಬ್ಲಾಗ್ ಮನಗೆ ಬಾರದೆ . ಮನೆ ಬೀಗ ತೆಗೆದು ಇವಾಗ ತಾನೇ ಒಳಗೆ ಬಂದವಳಿಗೆ ;  ಧೂಳಿನಲ್ಲಿ ಮಿಂದೆದ್ದಂತಿದ್ದ  ನಾ ಗೀಚುತ್ತಿದ್ದ ಪುಸ್ತಕ ಮತ್ತು ಲೇಖನ, ಬರೆಯಲು ಮೊದಲು ಮನದಲಿ  ಆರಂಭಗೊಳ್ಳುವ ವಿಷಯ ಆಯ್ಕೆ , ಸೂಕ್ತ ಪದ ಪ್ರಯೋಗದ ಗೊಂದಲಗಳೆಂಬೀ ..  ಕಸ ಗಳೆಲ್ಲಾ ನನ್ನನು ಸ್ವಾಗತಿಸಿದವು .  ಹ ..ಕೂಡಲೇ ಅವುಗಳನ್ನೆಲ್ಲಾ  ತೆಗೆದು ಸ್ವಚ್ಛ ಮಾಡಿದೆ. ಇವಾಗ ಮನೆಯನ್ನೆಲ್ಲ ಸ್ವಚ್ಛ  ಮಾಡಿ ಕುಳಿತಿರುವೆ ನಾ ; ಪುನಃ ಗೀಚಲು;  ಹೊಸ ಹುಮ್ಮಸ್ಸಿನ ಜೊತೆಗೆ ..... !!!


                                                                                  -ವಿಧಾತ್ರೀ .ಪಿ. ಎಸ್ 

Saturday, 15 July 2017

ಆಗು  ನೀ  ದೇಶದ  ಮಹಾನ್ ಚೇತನ                 

ಎಬ್ಬಿಸಿ  ನಿಮ್ಮ  ಆತ್ಮಬಲವನ್ನ 

ಹಾಕಿಕೊಳ್ಳಿ  ಮಹೋನ್ನತವಾದ ಗುರಿಯನ್ನ 

ಇಡಿ  ನಿಮ್ಮ ದೃಷ್ಟಿಯನು ಹೆಜ್ಜೆಯಿರಿಸುವ ಮುನ್ನ ;
ಸಾಕಾರಗೊಳಿಸಿ ,ನಮ್ಮ ವೀರರ ಕನಸನ್ನ //
                                  
ಸಿಲುಕಿಹಳು ನಮ್ಮಮ್ಮ ದೇಶದ್ರೋಹಿಗಳ ಬಂಧನದೊಳಗೆ ;
ರೆಯುತಿಹಳು ತನ್ನ ಮಕ್ಕಳನು  
ಬಿಡಿಸು ,ನನ್ನನೊಮ್ಮೆ //

ತಾಯಿಯ ಬಿಡುಗಡೆಗೆ ಬೇಕು ; 
ಹಣವಲ್ಲ , ನಿನ್ನ  ಅಮೂಲ್ಯ ಸಮಯ ! 
ಬಿಡು ನಿನ್ನ ಸ್ವಾರ್ಥವನು , ಇಡು  ಮುಂದೆ 
ಹೆಜ್ಜೆಯನು ;
ಹೋಗಲಾಡಿಸಲು  ಬಾ.... ದೇಶದ ಕತ್ತಲನು //

ಸಾಕು ನಿಲ್ಲಿಸು ; ಈ ಭೋಗ ಜೀವನ 
ಉದಯಿಸಲಿ ಹೃದಯದೊಳಗೆ ಸ್ಪೂರ್ತಿಯ ಪ್ರಜ್ವಲನ 
" ಆಗು  ನೀ ದೇಶದ ಮಹಾನ್ ಚೇತನ" 

Saturday, 4 March 2017

ನುಗ್ಗೆ -ಬದನೆ ಸಾಂಬಾರ್ ರಹಸ್ಯ

               
          ನುಗ್ಗೆ  ಮತ್ತು ಬದನೆ ಸಾಂಬಾರ್ ಎಂದರೆ ಸಾಕು; ನನಗಂತೂ ನೆನಪಾಗೋದು 'ಕೆಡ್ಡಾಸ'. ಕೆಡ್ಡಾಸದಂದು ಮಾಡುವ ನುಗ್ಗೆ ಬದನೆ ಸಾಂಬಾರ್. ಬೇರೆ ದಿನಗಳಲ್ಲೂ ಮಾಡಬಹುದು;ಆದರೂ ಕೆಡ್ಡಾಸ ಸಮಯದಲ್ಲಿ ವಿಶೇಷವಾಗಿ ಮಾಡುವರು. ನನಗಂತೂ  ಬಹಳ ಪ್ರಿಯ. ಕೆಡ್ದಾಸವು ತುಳುನಾಡ ವಿಶಿಷ್ಟ ಹಬ್ಬವಾಗಿದ್ದು, ಭೂಮಿ ತಾಯಿಯನ್ನು ಜನರು ಪೂಜಿಸುವ ದಿನ. ಭಾರತೀಯ ಪದ್ಧತಿ ಪ್ರಕಾರ ಇದು ಮಕರ ತಿಂಗಳಿನ ಇಪ್ಪತ್ತೇಳನೇ ದಿನದಂದು ಆರಂಭವಾಗಿ ಕುಂಭ ಸಂಕ್ರಮಣದಂದು ಕೊನೆಗೊಳ್ಳುವುದು. ಈ    ಮೂರು -ನಾಲ್ಕು ದಿನಗಳನ್ನು ತುಳುನಾಡ ಜನರು "ಕೆಡ್ದಾಸ" ಎನ್ನುವರು.

ಕೆಡ್ದಾಸ ಎಂದರೆ ಭೂಮಿ ತಾಯಿ ಮುಟ್ಟು ಆಗಿ ಸ್ನಾನ ಮಾಡುವವರೆಗಿನ ದಿನಗಳು.  ತುಳುನಾಡ ಜನರ ನಂಬಿಕೆಯಂತೆ ಈ ದಿವಸಗಳಲ್ಲಿ ಭೂಮಿಯನ್ನು ಅಗೆಯಬಾರದು. ಕೆಡ್ಡಾಸದ ಕೊನೆಯ ದಿನವಾದ ಕುಂಭ ಸಂಕ್ರಮಣದಂದು ಭೂಮಿ ತಾಯಿ ಮುಟ್ಟು ಕಳೆದು ಸ್ನಾನ ಮಾಡಲೆಂದು ತೆರಳುವ ದಿನ. ಆ ದಿನ ಮನೆಯ ಮುತ್ತೈದೆಯರು ಮುಂಜಾನೆ ಎದ್ದು  ತುಳಸಿ ಕಟ್ಟೆಯ ಮುಂದೆ ಗೊಂಪಿನ ಎಲೆಯಲ್ಲಿ ಭೂಮಿಗೆ ಸೀಗೆ ಪುಡಿ, ಬಾಗೇಪುಡಿ , ಅರಶಿನ ಮತ್ತು ಕುಂಕುಮ ಇಟ್ಟು ಭೂಮಿಗೆ ತೆಂಗಿನ ಎಣ್ಣೆಯನ್ನು ಬಿಟ್ಟು ನಮಸ್ಕರಿಸುವರು.







ಕೆಡ್ದಾಸದ ದಿನಗಳಲ್ಲಿ ವಿಶೇಷವಾಗಿ ಮಾಡಲಾಗುವ ನುಗ್ಗೆ ಬದನೆಕಾಯಿ ಸಾಂಬಾರ್ ನನಗೆ ಬಾಲ್ಯದಿಂದಲೇ ಇಷ್ಟ. ಮನೆಯಲ್ಲಿ ಏನೇ ವಿಶೇಷತೆ ಅಥವಾ ಯಾವುದೇ ಹೊಸ ವಿಷಯವಿರಲಿ ಅದನ್ನು ಕುತೂಹಲದಿಂದ ನೋಡಿ ; ಅದೇನು-ಇದೇನು , ಅದ್ಯಾಕೆ ಹಾಗೆ ? ಎಂದು ಹೆಚ್ಚಾಗಿ ಅಜ್ಜಿಯ ಬಳಿ  ಪ್ರಶ್ನಿಸುತ್ತಿದ್ದೆ. ಒಂದು ಸಲ ನನಗೆ ಪ್ರಶ್ನೆಯೊಂದು ಮನದಲ್ಲಿ ಸುಳಿದಾಡಲು ಶುರುವಾಯಿತು. ಅದು ಕೆಡ್ದಾಸದ ಸಮಯ.ನಾನಾಗ ಮೂರನೇ  ತರಗತಿಯಲ್ಲಿ ಓದುತ್ತಿದ್ದೆ . ಕೆಡ್ದಾಸದಂದು ನುಗ್ಗೆ ಬದನೆ ಸಾಂಬಾರ್ ನ್ನೇ ಯಾಕೆ ಮಾಡಿ ಉಣ್ಣಬೇಕು???.... ಎಂದು ನನ್ನಜ್ಜಿಯ ಬಳಿ ಕೇಳಿದೆ.


ನನ್ನ ಪುಟ್ಟ ಮನದೊಳಗೆ ಈ ಪ್ರಶ್ನೆ ಮೂಡಲು ಕಾರಣವಾದ ಅಂಶವೇನೆಂದರೆ - ನಾನು ವಿದ್ಯಾಭ್ಯಾಸ ಮಾಡಿದ್ದು ಸರ್ಕಾರಿ ಶಾಲೆಯಲ್ಲಿಯಾದ್ದರಿಂದ ,ಶಾಲೆ ಮಕ್ಕಳಿಗೆ ಸರಕಾರವು  ಉಚಿತ ಮಧ್ಯಾಹ್ನ ಬಿಸಿಯೂಟವನ್ನು ನೀಡುತ್ತಿತ್ತು . ಊಟ ಅಂದ್ಮೇಲೆ ಸಾಂಬಾರ್ ಬೇಕೇ ಬೇಕು ನೋಡಿ. ಶಾಲೆಯಲ್ಲಿ ಬದನೆಯನ್ನು ಸಾಂಬಾರ್ ಗೆ ಹಾಕಿದಂದು ಹೆಚ್ಚಿನ ನನ್ನೆಲ್ಲಾ ಸ್ನೇಹಿತರು ಬೇಡವೆಂದು ಚೆಲ್ಲುತ್ತಿದ್ದರು. ನಾನು ಒಂದು ದಿನ ನೀವ್ಯಾಕೆ ಬದನೆ ಹೋಳನ್ನು ಸಾಂಬಾರ್ ನಿಂದ ಹೆಕ್ಕಿ ಚೆಲ್ಲೋದು?... ಅಂತ ಕೇಳ್ದೆ. 
ಸಾಮಾನ್ಯವಾಗಿ ಬದನೆಕಾಯಿಯನ್ನು ಚರ್ಮವ್ಯಾಧಿ  ಇರುವವರು ನಂಜಾಗುತ್ತದೆ ಅನ್ನೋ ಕಾರಣಕ್ಕೆ ಸೇವಿಸುವುದಿಲ್ಲ.ಆದರೆ  ಶಾಲೆಯಲ್ಲಿ ವಿದ್ಯಾರ್ಥಿಗಳು 'ನಂಜು ಬದನೆ' ಎಂದೇ ಕರೆಯುತ್ತಿದ್ದರು ಮತ್ತು ತಿನ್ನದೇ ಚೆಲ್ಲುತ್ತಿದ್ದರು. ನಂಜು ಅಂದ್ರೆ ಒಂದರ್ಥದಲ್ಲಿ ಅಸೂಯೆ. ಬದನೆ ಜಾಸ್ತಿ ತಿಂದರೆ ನಂಜು ಭಾವನೆ ಹೆಚ್ಚಾಗುತ್ತೆ ಅಂತ ಸ್ನೇಹಿತರು ನನ್ನಲ್ಲಿ ಹೇಳಿದರು. ಹಾಗೆ ನಾನು ಕೂಡ ಬದನೆ ನಂಜು ಅಂತ ಅಂದುಕೊಂಡು ಬಿಟ್ಟೆ.

ಅದು ಕೆಡ್ದಾಸದ ಸಮಯವಾದ ಕಾರಣ ಮನೆಯಲ್ಲಿ ಪ್ರತಿವರ್ಷದಂತೆ ನುಗ್ಗೆ ಬದನೆ ಸಾಂಬಾರ್ ನ್ನು ಮಾಡಿದ್ದರು. ಪ್ರತಿ ನಿತ್ಯ ಮನೆಯಲ್ಲಿ ಅಜ್ಜ- ಅಜ್ಜಿ ಜೊತೆ ಕುಳಿತು ಊಟ ಮಾಡುತ್ತಿದ್ದ ನಾನು ಎಂದಿನಂತೆ ಊಟಕ್ಕೆ ಕುಳಿತು ನುಗ್ಗೆ ಬದನೆ ಸಾಂಬಾರ್ ಹಾಕಿ ಊಟ ಮಾಡ್ತಾ ಅಜ್ಜಿ ಬಳಿ ಯಾಕೆ ಕೆಡ್ಡಾಸದಂದು ನುಗ್ಗಿ ಬದನೆ ಸಾಂಬಾರ್ ಊಟ ಮಾಡಬೇಕು; ಬದನೆ ನಂಜಲ್ವಾ; ತಿಂದರೆ ನಂಜು ಹೆಚ್ಚಾಗುತ್ತಲ್ಲ ಯಾಕೆ ತಿನ್ನೋದು ಅಂತ ಕೇಳಿದೆ ? ಆಗ ಅಜ್ಜಿ ಅಂದ್ರು ಕೆಡ್ಡಾಸದಂದು ನುಗ್ಗೆ ಬದನೆ ಸಾಂಬಾರ್ ಮಾಡಿ ತಿನ್ನದಿದ್ದರೆ ನಮ್ಮ ಎಲುಬುಗಳೆಲ್ಲ ದುರ್ಬಲವಾಗುತ್ತವೆ (ಕುಂಬಾಗುತ್ತವೆ). ಹಾಗಾಗಿ ಎಲುಬುಗಳು ಗಟ್ಟಿಯಾಗಲಿ ಅಂತ ನುಗ್ಗೆ -ಬದನೆ ಸಾಂಬಾರ್ ಮಾಡಿ ತಿನ್ನೋದು ಅಂತ ಹೇಳಿದರು. ಕೂಡಲೇ ನಾನು ತಟ್ಟೆಬದಿಯಲ್ಲಿ ಹೆಕ್ಕಿಟ್ಟಿದ್ದ ಬದನೆ ಹೋಳನ್ನೆಲ್ಲ  ತಿಂದ್ಬಿಟ್ಟೆ. ಆವತ್ತಿನಿಂದ ನಂತ್ರ ನಾನಂತೂ ನುಗ್ಗೆ- ಬದನೆ ಸಾಂಬಾರನ್ನು ಊಟಮಾಡದೆ ಬಿಟ್ಟಿಲ್ಲಪ್ಪ.....                                 

ಇದು ನನ್ನ ಬಾಲ್ಯದ ಒಂದು ಸಣ್ಣ ನೆನಪು. ಈಗಂತೂ ಅದನ್ನು ನೆನೆದಾಗ ನಗು ಬರುವುದು. ಅದೆಲ್ಲ ಇರಲಿ ... ನೀವು ಸಹ ಇನ್ನು ಕೆಡ್ಡಾಸದಂದು ನುಗ್ಗೆ ಬದನೆ ಸಾಂಬಾರ್ ಊಟ ಮಾಡ್ತೀರಲ್ಲ.... ಇಲ್ಲದಿದ್ದರೆ ನಿಮ್ಮ ಎಲುಬುಗಳು ದುರ್ಬಲವಾಗುವವು . ತಿಳಿಯಿತಲ್ಲಾ.... ಈ ನುಗ್ಗೆ  ಬದನೆ  ಸಾಂಬಾರ್ ಯಾಕೆ ಕೆಡ್ದಾಸ ದಂದು  ಮಾಡಿ ಊಟ ಮಾಡಬೇಕು ಎಂಬುದರ ಬಗ್ಗೆ   ವೈಜ್ಞಾನಿಕ  ಕಾರಣ  ತಿಳಿಯದು ಮತ್ತು ಅದರ ವಿಚಾರವಾಗಿ ತಲೆಕೆಡಿಸಿಕೊಳ್ಳಲಿಲ್ಲ ಯಾಕಂದ್ರೆ ನಾನು ಕಲಾ ವಿಭಾಗದ ವಿದ್ಯಾರ್ಥಿ ;ಈ  ವೈಜ್ಞಾನಿಕ  ಹಿನ್ನಲೆ ನನಗೆ ತಿಳಿಯದು . ಬರೆಯುತ್ತಾ ಹೋದರೆ  ಬಹಳಷ್ಟಿವೆ ನನ್ನಜ್ಜಿ ಹೇಳಿದ ವಿಷಯಗಳು , ಅವುಗಳನ್ನು ಇನ್ನೊಮ್ಮೆ ತಿಳಿಸುವೆ; ಆಗ್ಬಹುದಾ???

                                                                                 -ವಿಧಾತ್ರೀ. ಪಿ. ಎಸ್ .